ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ನಿವಾಸಿ ಯೋಧ ಗಣೇಶ್ ಅವರು ಬಿಹಾರದ ಕಿಶನ್ ಗಂಜ್ ಪ್ರದೇಶದಲ್ಲಿ ನಿಗೂಢವಾಗಿ ಮೃತ ಪಟ್ಟಿದ್ದರು. ಅವರ ಪಾರ್ಥಿವ ಶರೀರ ಜಿಲ್ಲೆಗೆ ಆಗಮಿಸಿದ್ದು, ನಿನ್ನೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ರಜೆಯಲ್ಲಿ ಗ್ರಾಮಕ್ಕೆ ಬಂದಿದ್ದ ಯೋಧ ಗಣೇಶ್ ಅವರು ಜೂನ್ 9ರಂದು ಕರ್ತವ್ಯಕ್ಕೆ ಹಾಜರಾಗಲು ಬಿಹಾರದ ಕಿಶನ್ ಗಂಜ್ಗೆ ತೆರಳಿದ್ದು, ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಮೃತಪಟ್ಟಿದ್ದರು. ಇಂದು ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗಣೇಶ್ ಅಂತಿಮ ಸಂಸ್ಕಾರ ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ನಾಗಯ್ಯ - ಗಂಗಮ್ಮ ದಂಪತಿಯ ಮಗನಾದ ಗಣೇಶ್ಗೆ 6 ವರ್ಷದ ಹಿಂದೆ ಶ್ವೇತಾ ಎಂಬುವರ ಜೊತೆ ವಿವಾಹವಾಗಿತ್ತು. ದಂಪತಿಗೆ 5 ವರ್ಷದ ಮಗಳಿದ್ದಾಳೆ. ಮೂರು ವರ್ಷದ ಹಿಂದೆ ನಾಗಯ್ಯ - ಗಂಗಮ್ಮನ ಮತ್ತೊಬ್ಬ ಮಗ ಸಾವನ್ನಪ್ಪಿದ್ದರು. ಸದ್ಯ ಇಡೀ ಕುಟುಂಬಕ್ಕೆ ಗಣೇಶ್ ಅವರೇ ಆಧಾರ ಸ್ತಂಭವಾಗಿದ್ದರು. ಇದೀಗ ಈ ದುರಂತ ಕುಟುಂಬಕ್ಕಿದ್ದ ಆಧಾರಸ್ತಂಭವನ್ನೇ ಕಿತ್ತುಕೊಂಡಿದ್ದು, ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ಇದನ್ನೂ ಓದಿ: ಬಿಹಾರದಲ್ಲಿ ಚಿಕ್ಕಮಗಳೂರಿನ ಯೋಧ ನಿಗೂಢ ಸಾವು