ಚಿಕ್ಕಮಗಳೂರು: ಕಾಫಿನಾಡಿನ ಜನತೆ ಕಾಡಾನೆ, ಚಿರತೆ ದಾಳಿಯಿಂದ ಬೇಸತ್ತು ಹೋಗಿದ್ದು, ಇದೀಗ ಕಾಡುಕೋಣಗಳ ಹಾವಳಿ ಶುರುವಾಗಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿಯ ಮೂಲೆ ಮನೆಯ ಕಾಫಿ ಎಸ್ಟೇಟ್ ಬಳಿ ಆರಕ್ಕೂ ಹೆಚ್ಚು ಕಾಡುಕೋಣಗಳು ಕಾಣಿಸಿಕೊಂಡಿದ್ದು, ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಮುಖ್ಯ ರಸ್ತೆಯಲ್ಲಿ ನಿಂತುಕೊಂಡಿವೆ. ಈ ವೇಳೆ ದಾರಿ ಹೋಕರು ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೂ ಭಯಭೀತರಾಗಿದ್ದರು. ಬಳಿಕ ಕಾಡುಕೋಣಗಳು ಕಾಫಿ ತೋಟದ ಒಳಗೆ ಹಿಂಡು ಹಿಂಡಾಗಿ ನುಗ್ಗಿವೆ.
ಈಗ ಮಲೆನಾಡಿನ ಎಲ್ಲಾ ಭಾಗದಲ್ಲಿ ಕಾಫಿ ಕಟಾವು ಮಾಡಲಾಗುತ್ತಿದೆ. ಆದರೆ ಕಾಡುಕೋಣಗಳು ತೋಟಗಳಲ್ಲಿ ಸಂಚರಿಸುತ್ತಿರುವುದರಿಂದ ಕಟಾವು ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಾಫಿ ತೋಟದ ಮಾಲೀಕರು ಕಂಗಾಲಾಗಿದ್ದು, ಕೂಡಲೇ ಅರಣ್ಯ ಇಲಾಖೆ ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.