ಚಿಕ್ಕಮಗಳೂರು: ತಾಯಿಯನ್ನು ಉಡುಪಿಯ ವೃದ್ಧಾಶ್ರಮಕ್ಕೆ ಬಿಟ್ಟು ಹೋಗಲು ಬಂದಿದ್ದ ಮಗನ ಪ್ಲಾನ್ ಇಂದು ಉಲ್ಟಾ ಆಗಿದೆ. ಇವತ್ತು ಸರ್ಕಾರ ಸಂಪೂರ್ಣ ಲಾಕ್ಡೌನ್ ಘೋಷಿಸಿರುವುದರಿಂದ ಹಿರಿಯ ಜೀವ ಮತ್ತೆ ತನ್ನ ಗೂಡು ಸೇರಿರುವಂತ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಹೌದು, ಇದು ಮನುಷ್ಯತ್ವವನ್ನೇ ಪ್ರಶ್ನಿಸುವಂತ ಘಟನೆ... ಹೊತ್ತು- ಹೆತ್ತು ಲಾಲಿ ಹಾಡಿದ್ದ ತಾಯಿಯನ್ನೇ ಮಗನೋರ್ವ ತಾಯಿಗೆ ಇಷ್ಟವಿಲ್ಲದಿದ್ದರೂ ಆಕೆಯನ್ನು ವೃದ್ಧಾಶ್ರಮಕ್ಕೆ ಸೇರಿಸಲು ಮುಂದಾಗಿದ್ದ. ಆ ಹಿರಿಯ ಜೀವ ಒತ್ತಾಯದಿಂದಲೇ ಮನೆಯಿಂದ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಿತ್ತು. ಅದೃಷ್ಟವಶಾತ್ ಇಂದು ಸರ್ಕಾರ ಲಾಕ್ಡೌನ್ ಜಾರಿಗೊಳಿಸಿರುವುದು ವೃದ್ಧೆಗೆ ವರವಾಗಿದೆ. ಚಿಕ್ಕಮಗಳೂರಿನ ಬಸ್ ನಿಲ್ದಾಣದಲ್ಲಿ ಬಸ್, ವಾಹನಗಳ ಸೌಲಭ್ಯ ಇಲ್ಲದ ಕಾರಣ ಅಜ್ಜಿ ವೃದ್ಧಾಶ್ರಮ ಸೇರುವ ಬದಲು ತನ್ನ ಮನೆಗೆ ವಾಪಸ್ ಆಗಿದ್ದಾಳೆ.
ಇತ್ತ, ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸಲು ಲಗೇಜ್ ಸಮೇತ ಬಸ್ ನಿಲ್ದಾಣಕ್ಕೆ ಬಂದು ಇನ್ನಿಲ್ಲದ ಕಸರತ್ತು ನಡೆಸಿದ್ದ ಮಗ ಮಾತ್ರ ಅತ್ತಿತ್ತ ಸುಳಿದಾಡುತ್ತಿದ್ದ ದೃಶ್ಯ ಕಂಡುಬಂದಿದೆ. ತಾಯಿ ವೃದ್ಧಾಶ್ರಮಕ್ಕೆ ಹೋಗಲು ಒಪ್ಪದೇ ತನ್ನ ಗೂಡಿಗೆ ಹಿಂದಿರುಗಿದ್ದಾಳೆ.
ಇಂದು ಸರ್ಕಾರ ಘೋಷಿಸಿರುವ ಸಂಪೂರ್ಣ ಲಾಕ್ಡೌನ್ ಕುರಿತಾದ ಮಾಹಿತಿ ತಿಳಿಯದೇ ಈತ ತಾಯಿಯನ್ನು ಕರೆತಂದು ಕೆಲಕಾಲ ಚಿಕ್ಕಮಗಳೂರಿನ ಬಸ್ ನಿಲ್ದಾಣದ ಬಳಿ ಕಾಯುತ್ತ ನಿಂತಿದ್ದ. ಬಸ್ ವ್ಯವಸ್ಥೆ ಇಲ್ಲದಿರುವುದನ್ನು ತಿಳಿದು ಹೋಟೆಲ್ ಮುಂದೆ ಲಗೇಜ್ ಇಟ್ಟುಕೊಂಡು ಕೆಲಹೊತ್ತು ಸಮಯ ಕಳೆದರು. ನಂತರ ತಾಯಿ ಉಡುಪಿಗೆ ಹೋಗಲು ನಿರಾಕರಿಸಿದ ಹಿನ್ನೆಲೆ ಆಕೆಯನ್ನು ಮಗ ಮನೆಗೆ ಕರೆದೊಯ್ದ.