ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ಸಾಹಸಿಗಳ ಹಾಟ್‌ಸ್ಪಾಟ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ವರ್ಷಪೂರ್ತಿ ಒಂದಿಲ್ಲೊಂದು ಕಾರಣದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ಮಲೆನಾಡಿನ ಸೊಬಗು ಸವಿಯುವುದೇ ಒಂದು ಅದ್ಭುತ ಅನುಭವ.
ಚಳಿಯ ಮಧ್ಯೆಯೂ ಹಸಿರು ಹೊದ್ದು ಬೆಚ್ಚಗೆ ಮಲಗಿರುವ ಮುಗಿಲೆತ್ತರದ ಬೆಟ್ಟಗುಡ್ಡಗಳನ್ನು ನೋಡಿದರೆ ಪ್ರಕೃತಿ ಮಾತೆಯ ತವರು ಚಿಕ್ಕಮಗಳೂರು ಕಾಣಿಸುತ್ತದೆ. ಎತ್ತ ನೋಡಿದರೂ ಹಸಿರಸಿರಿ, ಜೊತೆಗೆ ತಣ್ಣನೆಯ ಗಾಳಿ. ಕ್ಷಣಕ್ಕೊಂದು ರೀತಿ ಬದಲಾಗುವ 'ದೇವರ ಮನೆ' ಬೆಟ್ಟದ ಪರಿಸರ ನೋಡಿದರೆ ಮನಸೋಲದವರುಂಟೇ?. ಮೋಡಗಳ ಕಣ್ಣಾಮುಚ್ಚಾಲೆ ಆಟ, ಜೋರಾಗಿ ಬೀಸುತ್ತಿರುವ ತಂಗಾಳಿ, ಕಣ್ಣಿಗೆ ಹಬ್ಬದೂಟ ಉಣಬಡಿಸುವ ದೂರದಲ್ಲಿ ಕಾಣುವ ಸಣ್ಣ ಸಣ್ಣ ಜಲಪಾತಗಳು.. ದೇವರೇ ಸೃಷ್ಟಿಸಿರುವ ಈ ಸುಂದರ ಲೋಕ 'ದೇವರಮನೆ'.
ಭೂಲೋಕದ ಸ್ವರ್ಗವೆಂದೇ ಖ್ಯಾತಿಯಾಗಿರುವ ಈ ಸ್ಥಳವಿರುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ. ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ನೋಡಲು ಕಣ್ಣೆರಡು ಸಾಲದು. ಗುಡ್ಡದ ತುದಿಯಲ್ಲಿ ನಿಂತು ಸುತ್ತಲೂ ಕಣ್ಣಾಯಿಸಿದರೆ ಇಲ್ಲಿನ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ಟ್ರಕ್ಕಿಂಗ್ ಪ್ರಿಯರಿಗಂತೂ ಹೇಳಿ ಮಾಡಿಸಿದ ತಾಣ. ಚಾರಣಿಗರು ಸದಾ ಇಲ್ಲಿನ ಪ್ರಕೃತಿ ಮಡಿಲಲ್ಲಿ ಬಂದು ಕುಳಿತು ಮೈಮರೆಯುವ ಸ್ಥಳ.
ಪ್ರಕೃತಿಯ ಮಡಿಲಿನಲ್ಲಿರುವ ದೇವರಮನೆ ತಪ್ಪಲಿನಲ್ಲಿಯೇ ಕಾಲಭೈರವೇಶ್ವರನ ದೇವಸ್ಥಾನವೂ ಇದೆ. ಪ್ರಕೃತಿಯ ಮಹಿಮೆಯಿಂದ ಗಿರಿ ಶಿಖರಗಳು ರಂಗು ಪಡೆದಿದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ ಕಣ್ಮರೆಯಾಗುವ ಇಲ್ಲಿನ ಮಂಜಿನಾಟ ನೋಡುವುದೇ ಸುಂದರ.