ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು ಹೊಸದಾಗಿ 5 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಕಳೆದ ಮೂರು ದಿನಗಳ ಹಿಂದೆ ಮುಂಬೈನಿಂದ ಎನ್.ಆರ್ ಪುರ ತಾಲೂಕಿಗೆ ಟೆಂಪೋ ಟ್ರಾವೆಲರ್ ಮೂಲಕ ಆಗಮಿಸಿದ್ದ 9 ಜನರಲ್ಲಿ 3 ಮಕ್ಕಳಿಗೆ ಈ ಸೋಂಕು ಪತ್ತೆಯಾಗಿತ್ತು. ನಂತರ ಕುಟುಂಬದ ಎಲ್ಲಾ ಸದಸ್ಯರ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಗಾಗಿ ಹಾಸನ ಜಿಲ್ಲೆಗೆ ಕಳುಹಿಸಿಕೊಡಲಾಗಿತ್ತು. ಇಂದು ಫಲಿತಾಂಶ ಬಂದಿದ್ದು, ಎನ್.ಆರ್ ಪುರ ತಾಲೂಕಿನ 2 ಕುಟುಂಬಗಳ ಐದು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 10ಕ್ಕೆ ಏರಿಕೆಯಾಗಿದೆ.
7 ವರ್ಷದ ಗಂಡು ಮಗು, 49 ವರ್ಷದ ಪುರುಷ, 46 ವರ್ಷದ ಪುರುಷ, 48 ವರ್ಷದ ಮಹಿಳೆ, 14 ವರ್ಷದ ಬಾಲಕಿಯಲ್ಲಿ ಸೋಂಕು ಇರುವುದು ಇಂದು ಪತ್ತೆಯಾಗಿದೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಸೋಂಕಿತರ ಸಂಪರ್ಕದಲ್ಲಿದ್ದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಶೋಧಿಸುವ ಕಾರ್ಯ ನಡೆಯುತ್ತಿದ್ದು, ಈ 5 ಜನ ಸೋಂಕಿತರನ್ನು ಚಿಕ್ಕಮಗಳೂರು ನಗರದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.