ಚಿಕ್ಕಮಗಳೂರು: ಕಳೆದೊಂದು ವಾರದಿಂದ ಮೋಡ ಕವಿದ ವಾತಾವರಣವಿದ್ದ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಇನ್ನೂ ಕೆಲ ಭಾಗದಲ್ಲಿ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿದಿದೆ. ಈ ಅಕಾಲಿಕ ಮಳೆಯಿಂದ ಜಿಲ್ಲೆಯ ಕಾಫಿ ಬೆಳೆಗಾರರು ಹೈರಾಣಾಗಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಮಳೆ ಸುರಿಯೋದು ತೀರಾ ವಿರಳ. ಆದರೆ, ಈ ವರ್ಷ ಭಾರಿ ಗಾಳಿ-ಚಳಿಯೊಂದಿಗೆ ಆಗಾಗ್ಗೆ ಮಳೆ ಸುರಿಯುತ್ತಿರೋದು ಜಿಲ್ಲೆಯ ಕಾಫಿ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ. ಈಗಾಗಲೇ ಕಾಫಿ ಹಣ್ಣಾಗಿದ್ದು ಕೊಯ್ಲಿಗೆ ಬಂದಿದೆ. ಈಗ ಕಾಫಿ ಬೀಜಗಳನ್ನು ಕೀಳದಿದ್ದರೆ ಉದುರಿ ಹೋಗುತ್ತೆ. ಕಿತ್ತರೆ ಒಣಗಿಸಲು ಬಿಸಿಲಿಲ್ಲ. ಜೊತೆಗೆ ಸಣ್ಣದಾಗಿ ಸುರಿಯುತ್ತಿರೋ ಮಳೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಕಾಫಿಯನ್ನು ಕೊಯ್ದಿರೋ ಬೆಳೆಗಾರರು ಕಾಫಿಯನ್ನು ಒಣಗಿಸಲು ಪರದಾಡುವಂತಾಗಿದೆ. ಅಲ್ಪ ಸ್ವಲ್ಪ ಒಣಗಿರೋ ಕಾಫಿ ಈ ಮಳೆಗೆ ನೆಂದರೆ ಕೊಳೆತು ಹೋಗುವ ಭಯ ಎದುರಾಗಿದೆ. ಆಗಸ್ಟ್ ತಿಂಗಳ ಮೊದಲ 10 ದಿನ ಸುರಿದ ಮಹಾಮಳೆ-ಗಾಳಿಗೆ ಶೇ 40 ರಷ್ಟು ಕಾಫಿ ಉದುರಿತ್ತು. ಅಳಿದುಳಿದ ಬೆಳೆಯನ್ನು ಅಲ್ಲಿಂದ ರಕ್ಷಿಸಿಕೊಂಡು ಬಂದಿದ್ದರು. ಈಗ ಕಾಫಿ ಕೀಳಲು ಜನರಿಲ್ಲ. ಹೇಗೋ ಕಷ್ಟಪಟ್ಟು ಕೀಳಿಸಿ ತುಂದು ಮನೆ ಮುಂದೆ ಹಾಕಿದರೆ ಒಣಗಿಸಲು ಬಿಸಿಲಿಲ್ಲ. ಜೊತೆಗೆ ಮಳೆಯಿಂದಾಗಿ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ.