ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರಂಭವಾಗಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುತ್ತಿದೆ. ಸರ್ಕಾರ ಮತ್ತೆ ಟಫ್ ರೂಲ್ಸ್ಗಳತ್ತ ಚಿಂತಿಸುತ್ತಿದ್ದರೆ, ಇತ್ತ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಹೌದು, ದಿನೇ ದಿನೆ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಪ್ರವಾಸಿಗರಲ್ಲಿ ಬಹುತೇಕರು ಮಾಸ್ಕ್ ಧರಿಸುತ್ತಿಲ್ಲ. ಜತೆಗೆ ಸಾಮಾಜಿಕ ಅಂತರವನ್ನೂ ಕಾಪಾಡುತ್ತಿಲ್ಲ. ಪ್ರವಾಸಿಗರ ಈ ನಡೆಗೆ ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪ್ರವಾಸಿ ತಾಣಗಳಲ್ಲಿ ಮಾಸ್ಕ್ ಹಾಕದೆ ಬೇಕಾಬಿಟ್ಟಿ ಓಡಾಡಿದರೆ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡಬಹುದು. ಆಗ, ನಾವು ಲಾಕ್ಡೌನ್ ಬೇಡ ಅಂದ್ರು ಸರ್ಕಾರಕ್ಕೆ ಬೇರೆ ದಾರಿ ಉಳಿದಿರುವುದಿಲ್ಲ. ಹಾಗಾಗಿ, ಪ್ರವಾಸಿಗರು ಮುಖಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿದರೆ ಎಲ್ಲರಿಗೂ ಒಳ್ಳೆಯದು ಎನ್ನುತ್ತಿದ್ದಾರೆ.
ಪ್ರವಾಸಿಗರ ಈ ಬೇಜಾವಾಬ್ದಾರಿಗೆ ಸರ್ಕಾರದ ನಿರ್ಲಕ್ಷ್ಯವೂ ಕಾರಣವಾಗಿದೆ. ಜಿಲ್ಲಾಡಳಿತ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ ಮುಳ್ಳಯ್ಯನಗಿರಿಗೆ ಪೊಲೀಸರು ಅಥವಾ ಅಧಿಕಾರಿಗಳನ್ನು ನೇಮಕ ಮಾಡಿ ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಸೋಂಕು ಹೆಚ್ಚಳವಾಗುವುದನ್ನು ನಿಯಂತ್ರಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.