ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ನೂರಾರು ಜನರು ತತ್ತರಿಸಿ ಹೋಗಿದ್ದು, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸರ್ಕಾರದ ವತಿಯಿಂದ ತಾತ್ಕಾಲಿಕ ಪರಿಹಾರ ಚೆಕ್ ವಿತರಿಸಿದರು.
ಎನ್ಆರ್ಪುರ ತಾಲೂಕಿನಲ್ಲಿ ಮನೆ ಬಿದ್ದು, ತಮ್ಮ ಸರ್ವಸ್ವವನ್ನೇ ಕಳೆದುಕೊಂಡಿರುವ ನೂರಾರು ಜನ ನಿರಾಶ್ರಿತರು ಬಾಳೆಹೊನ್ನೂರು ಹೋಬಳಿಯ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಎಸ್ಪಿ ಹರೀಶ್ ಪಾಂಡೆ, ಜಿಲ್ಲಾ ಪಂಚಾಯತ್ ಸಿಇಓ ಅಶ್ವಿತಿ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಯೊಬ್ಬರ ಯೋಗಕ್ಷೇಮ ವಿಚಾರಿಸಿದ್ದಾರೆ. ಮನೆ ಹಾಗೂ ತೋಟವನ್ನು ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ತಾತ್ಕಾಲಿಕ ಪರಿಹಾರ ಚೆಕ್ ವಿತರಣೆ ಮಾಡಿದ್ದಾರೆ.
ಇದು ತಾತ್ಕಾಲಿಕವಾಗಿದ್ದು, ಸರ್ಕಾರದ ವತಿಯಿಂದ ಹಣ ಬರುತ್ತದೆ ಎಂಬ ಭರವಸೆ ನೀಡಿದ್ದಾರೆ. ಮಹಾಮಳೆ ಸೃಷ್ಠಿ ಮಾಡಿದ ಅವಾಂತರದಿಂದ ಯಾರು ಕುಗ್ಗಬೇಡಿ. ಎಲ್ಲರೂ ಧೈರ್ಯವಾಗಿರಿ. ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ನಿರಾಶ್ರಿತರಲ್ಲಿ ಧೈರ್ಯ ತುಂಬಿದರು.