ಚಿಕ್ಕಮಗಳೂರು: ನಿಯಂತ್ರಣ ತಪ್ಪಿದ ಕಾರು ಕಂದಕಕ್ಕೆ ಉರುಳಿ ಚಾಲಕ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸದ ಬಾಳೂರು ರಸ್ತೆಯ ಅಬ್ರು ಗುಡಿಗೆ ಎಂಬಲ್ಲಿ ಇಂದು ನಡೆದಿದೆ. 200 ಅಡಿ ಆಳದ ಪ್ರಪಾತಕ್ಕೆ ಮಾರುತಿ 800 ಕಾರು ಬಿದ್ದು ಸಂಪೂರ್ಣ ಜಖಂ ಆಗಿದೆ. ಅಂಜನ್ (38) ಘಟನೆಯಲ್ಲಿ ಮೃತಪಟ್ಟ ಚಾಲಕ ಎಂದು ಗುರುತಿಸಲಾಗಿದೆ.
ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ಹೋಟೆಲ್ ನಡೆಸುತ್ತಿದ್ದ ಅಂಜನ್ ಹೊರನಾಡು ದೇವಸ್ಥಾನಕ್ಕೆಂದು ತಮ್ಮ ಕಾರಿನಲ್ಲಿ ಒಬ್ಬರೇ ಹೊರಟಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿ ಯಾವುದೇ ತಡೆಗೋಡೆ ಇಲ್ಲದೆ ಏಕಾಏಕಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ: ಚಿತ್ತಾಪುರ ತಾಲೂಕಿನ ಹಳಕರ್ಟಿ-ಲಾಡ್ಲಾಪುರ ಗ್ರಾಮಗಳ ನಡುವಿನ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ಇತ್ತೀಚೆಗೆ ಕಾರು ಪಲ್ಟಿಯಾಗಿತ್ತು. ಬಾಲಕ ಸೇರಿ ಇಬ್ಬರು ಮೃತಪಟ್ಟು, ಏಳು ಜನರಿಗೆ ಗಂಭೀರ ಗಾಯಗಳಾಗಿತ್ತು. ಶಹಬಾದ್ ಪಟ್ಟಣದ ನಿಜಾಂಬಜಾರ್ ನಿವಾಸಿಗಳಾದ ದಯಾನಂದ ದೇವಸಿಂಗ್ (8) ಮತ್ತು ರಮೇಶ ಪವಾರ (45) ಮೃತಪಟ್ಟಿದ್ದರು. ದೇವರ ಕಾರ್ಯಕ್ಕೆಂದು ಹೋಗಿ ಮರಳುವಾಗ ದುರ್ಘಟನೆ ನಡೆದಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ತಿರುಮಲೇಶ ಕುಂಬಾರ ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಸ್ ಪಲ್ಟಿಯಾಗಿ 25 ಮಂದಿಗೆ ಗಾಯ: ಅ.24 ರಂದು ಪಶ್ಚಿಮ ಬಂಗಾಳದ ಪ್ರವಾಸಿಗರಿದ್ದ ಬಸ್ ಪಲ್ಟಿಯಾಗಿ 25 ಮಂದಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದ ಮೇಲುಕಾಮನಹಳ್ಳಿ ಇಳಿಜಾರಿನಲ್ಲಿ ಸಂಭವಿಸಿತ್ತು. ತಮಿಳುನಾಡಿನ ತೀರ್ಥಕ್ಷೇತ್ರಗಳನ್ನು ನೋಡಿಕೊಂಡು ಬಂಡೀಪುರ ಮಾರ್ಗವಾಗಿ ಕರ್ನಾಟಕಕ್ಕೆ ಬರುತ್ತಿದ್ದಾಗ ಇಳಿಜಾರು ರಸ್ತೆಯಲ್ಲಿ ಬ್ರೇಕ್ ಫೆಲ್ಯೂರ್ ಆಗಿ ಅವಘಡ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಬಸ್‌ನಲ್ಲಿ ಅಡುಗೆ ಸಿಬ್ಬಂದಿ ಸೇರಿದಂತೆ 65 ಮಂದಿ ಪ್ರಯಾಣ ಮಾಡುತ್ತಿದ್ದರು. 25 ಮಂದಿ ಗಾಯಗೊಂಡಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಇದನ್ನೂ ಓದಿ: ಚಿತ್ತಾಪುರದಲ್ಲಿ ಕಾರು ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಸಾವು; 7 ಮಂದಿಗೆ ಗಾಯ