ಚಿಕ್ಕಮಗಳೂರು: ನಗರದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಸಿಲುಕಿದ ಕಾರು ಚಾಲಕನೊಬ್ಬ ನಿಯಂತ್ರಣ ತಪ್ಪಿ, ಸೇತುವೆ ಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕಾರು ಚಾಲಕ ಸತೀಶ್ (35) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಳಿ ಈ ಘಟನೆ ನಡೆದಿದ್ದು, ನಿರಂತರ ಮಳೆ ಸುರಿಯುತ್ತಿರುವ ಕಾರಣದಿಂದ ಈ ಘಟನೆ ನಡೆದಿದೆ ಎಂದೂ ಹೇಳಲಾಗುತ್ತಿದೆ. ಚಿಕ್ಕಮಗಳೂರಿನ ನಗರ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.
ಇತ್ತ ಶೃಂಗೇರಿಯಲ್ಲೂ ಕಾರು ಅಪಘಾತವಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಜೊತೆಗೆ ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ವಿಘ್ನೇಶ್ ನನ್ನು ಮಣಿಪಾಲ ಆಸ್ವತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು ಶೃಂಗೇರಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೃಂಗೇರಿ ತಾಲೂಕಿನ ಶಿಡ್ಲೆ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಮೂಡಿಗೆರೆಯಲ್ಲಿ ಅತಿವೃಷ್ಟಿಗೆ ಒಳಗಾದ ಪ್ರದೇಶಗಳಿಗೆ ಸಂಸದೆ ಶೋಭ ಕರಂದ್ಲಾಜೆ ಭೇಟಿ:
ಮೂಡಿಗೆರೆ ತಾಲೂಕಿನ ಜಾವಳಿ, ಮೇಗೂರು, ಆಲೇಖಾನ್, ಚಾರ್ಮಾಡಿ ಘಾಟಿ ಪ್ರದೇಶಗಳಿಗೆ ಭೇಟಿ ನೀಡಿದ ಶೋಭ ಕರಂದ್ಲಾಜೆ ಈ ಪ್ರದೇಶಗಳಲ್ಲಿ ಆಗಿರುವಂತಹ ಅನಾಹುತಗಳನ್ನು ಖುದ್ದು ವೀಕ್ಷಣೆ ಮಾಡಿದರು. ನಂತರ ಮಾಕೋನಹಳ್ಳಿ, ಹಂತೂರು, ಕಣಚೂರು, ಉಗ್ಗೇಹಳ್ಳಿ ಗ್ರಾಮಗಳಿಗೆ ತೆರಳಿಗೆ ಅಲ್ಲಿಯೂ ಸ್ಥಳ ಪರಿಶೀಲನೆ ಮಾಡಿದ್ದು, ಮಳೆಯಿಂದಾ ಹಾನಿಯಾಗಿದ್ದಂತಹ ಪ್ರದೇಶಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.
ನಂತರ ಅವರು ಹೇಮಾವತಿ, ಭದ್ರಾ ನದಿಗಳಲ್ಲಿ ಹರಿಯುತ್ತಿರುವ ನದಿಯ ನೀರಿನ ಪ್ರಮಾಣವನ್ನು ವೀಕ್ಷಣೆ ಮಾಡಿದ್ದು, ನಂತರ ಮೂಡಿಗೆರೆ ತಾಲೂಕಿನ ಹೇಮಾವತಿ ನದಿಯ ನೀರಿನಲ್ಲಿ ಯುವಕ ಕೊಚ್ಚಿ ಹೋಗಿದ್ದ ಸ್ಥಳಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಅವರ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿದರು.
ಈ ವೇಳೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಹಾಗೂ ಶೃಂಗೇರಿಯ ಮಾಜಿ ಶಾಸಕ ಡಿ.ಎನ್ ಜೀವರಾಜ್ ಅವರು ಶೋಭ ಕರಂದ್ಲಾಜೆ ಅವರಿಗೆ ಸಾಥ್ ನೀಡಿದರು.