ಚಿಕ್ಕಮಗಳೂರು: ಈಗ ಕಾಂಗ್ರೆಸ್ ಪಕ್ಷಕ್ಕೆ ಕ್ಯಾನ್ಸರ್ ವ್ಯಾಪಿಸಿದೆ, ಆ ಕಾಯಿಲೆಗೆ ಚಿಕಿತ್ಸೆ ಇಲ್ಲ. ಕ್ಯಾನ್ಸರ್ ವ್ಯಾಪಿಸಿದ ಮೇಲೆ ಇಡೀ ದೇಹವನ್ನು ತಿನ್ನುತ್ತದೆ. ಎಲ್ಲಿಯವರೆಗೆ ಕಾಂಗ್ರೆಸ್ ಜಾತಿವಾದ, ಪರಿವಾರ ವಾದ, ಭ್ರಷ್ಟಾಚಾರದಲ್ಲೇ ಮುಳುಗಿರುತ್ತೋ ಅಲ್ಲಿವರೆಗೆ ಅದಕ್ಕೆ ಚಿಕಿತ್ಸೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಬಿಟ್ಟರೂ ಆಶ್ಚರ್ಯವಿಲ್ಲ. ಸಿದ್ದರಾಮಯ್ಯ ಆಪ್ತ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಬಿಡುತ್ತಿದ್ದಾರೆ. ಅವರು ಎಂತಹ ದೋಸ್ತ್ ಎಂದು ರಾಜ್ಯಕ್ಕೆ ಗೊತ್ತು. ಚಡ್ಡಿದೋಸ್ತ್, ಕ್ಲಾಸು-ಗ್ಲಾಸು ಎಂತೆಂಥದ್ದೋ ಹೇಳುತ್ತಾರೆ. ಎಲ್ಲರನ್ನೂ ಮುಂದೆ ಕಳಿಸಿ ನಾಳೆ ಸಿದ್ದರಾಮಯ್ಯ ಸಹ ಕಾಂಗ್ರೆಸ್ ಬಿಟ್ಟು ಬಂದರೂ ಬರಬಹುದು. ಕರ್ನಾಟಕ ಸೇರಿ ಅಲ್ಲಲ್ಲಿ ಕಾಂಗ್ರೆಸ್ ಗುಟುಕು ಜೀವ ಇಟ್ಟುಕೊಂಡಿದೆ. ಪಕ್ಷದ ಬೆಳವಣಿಗೆಗೆ ನೇತೃತ್ವ-ನೀತಿ ಕಾರಣವಾಗುತ್ತೆ. ಇಂದು ಕಾಂಗ್ರೆಸ್ ನೇತೃತ್ವ-ನೀತಿ ಹೀನಾಯವಾಗಿದೆ. ನೇತೃತ್ವ-ನೀತಿಹೀನ ಪಕ್ಷದ ಮೇಲೆ ಜನ ಹೇಗೆ ವಿಶ್ವಾಸವಿಡುತ್ತಾರೆ ಎಂದು ಲೇವಡಿ ಮಾಡಿದರು.
ನಂತರ ಕಾಂಗ್ರೆಸ್ ಸದಸ್ಯತ್ವದ ಅಭಿಯಾನ ಕುರಿತು ಟೀಕಿಸಿದ ಸಿ ಟಿ ರವಿ, ಹೊತ್ಕಂಡ್ ಹೋದ ನಾಯಿ ಶಿಕಾರಿ ಮಾಡುತ್ತಾ...? ಆಸೆ-ಆಮಿಷ ತೋರಿಸಿ ಸದಸ್ಯತ್ವ ಮಾಡಿಸಿದರೆ ಪಾರ್ಟಿ ಕಮಿಟ್ಮೆಂಟ್ ಎಲ್ಲಿರುತ್ತೆ. ವಿಚಾರಧಾರೆ, ನಾಯಕತ್ವದ ಮೇಲೆ ನಂಬಿಕೆ, ವಿಶ್ವಾಸವಿದ್ದು ಸದಸ್ಯರಾಗುವವರು ಉಳಿಯುತ್ತಾರೆ. ಆಸೆ ತೋರಿಸಿ ಸದಸ್ಯರನ್ನಾಗಿಸಿದರೆ ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಮಾವನ ಕಡೆ ಅಂತ ಹೋಗ್ತಾರೆ. ನಾಳೆ ಮತ್ಯಾರೋ ಮಿಕ್ಸಿ ಕೊಡ್ತೀವಿ ಅಂದ್ರೆ ಆಕಡೆ ಹೋಗ್ತಾರೆ ಎಂದರು.
2023 ಮಾರ್ಚ್ ಬಳಿಕವೇ ಕರ್ನಾಟಕದಲ್ಲಿ ಚುನಾವಣೆ ನಡೆಯುವುದು. ಜನರಿಗೆ ಕೊಟ್ಟಿರುವ ಆಶ್ವಾಸನೆ ಈಡೇರಿಸಿ, ಆಡಳಿತಕ್ಕೆ ಚುರುಕು ಮುಟ್ಟಿಸಿದ ಬಳಿಕವೇ ಎಲೆಕ್ಷನ್ ನಡೆಯಲಿದ್ದು, ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ನಾನು ಕಾರ್ಯಕರ್ತ ಅಷ್ಟೇ, ಜಮ್ಮು-ಪಶ್ಚಿಮ ಬಂಗಾಳ-ಗುಜರಾತ್ ಎಲ್ಲಿಗೆ ಹಾಕಿದರು ಹೋಗುತ್ತೇನೆ. ಕಾರ್ಯಕರ್ತನಿಗೆ ಕೆಲಸ ಮಾಡುವುದಷ್ಟೇ ಜವಾಬ್ದಾರಿ-ಕರ್ತವ್ಯ ಎಂದು ಹೇಳಿದ್ರು.