ಚಿಕ್ಕಮಗಳೂರು: ಆರ್ಎಸ್ಎಸ್ ಸಾಧನೆ ಬಗ್ಗೆ ಚರ್ಚೆಯಾಗಲಿ ಎಂಬ ವಿ. ಎಸ್ ಉಗ್ರಪ್ಪ ಹೇಳಿಕೆ ವಿಚಾರದ ಬಗ್ಗೆ ಬಿಜೆಪಿ ನಾಯಕ ಸಿ. ಟಿ ರವಿ ತಿರುಗೇಟು ನೀಡಿದ್ದು, ಚರ್ಚೆ ಮಾಡೋದಾದ್ರೆ ವೇದಿಕೆ ರೂಪಿಸಲಿ, ಚರ್ಚೆ ಮಾಡೋಣ. ಸಂಘ ಏನು ಬರೋದಿಲ್ಲ, ನಾವೇ ಬರುತ್ತೇವೆ. ತನ್ನ ಕೆಲಸವನ್ನು ಹೇಳಿಕೊಳ್ಳುವ ಸ್ವಭಾವ ಸಂಘಕ್ಕೆ ಇಲ್ಲ. ಅವರಿಗೆ ಒಂದು ಪುಸ್ತಕ ಕಳಿಸುತ್ತೇನೆ, ಓದಿಕೊಳ್ಳಲಿ. ಏನಾದರೂ ಸಂಶಯ ಬಂದರೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ರಾಜ್ಯದ ಹಲವೆಡೆ ಕೈ ನಾಯಕರು RSS ಚಡ್ಡಿ ಸುಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದವರು ಇಂತಹ ಕೆಲಸವನ್ನೇ ಮಾಡಿಕೊಂಡು ಇರಲಿ. ರಾಜ್ಯದ ಎಲ್ಲಾ ಕಾರ್ಯಕರ್ತರಿಗೂ ಕರೆ ಕೊಡುತ್ತೇನೆ. ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಿ. ಎಲ್ಲರೂ ಹಳೆಯ ಚಡ್ಡಿಗಳನ್ನು ಕಳುಹಿಸಿ ಕೊಡಿಯೆಂದು ಕರೆ ಕೊಡುತ್ತೇನೆ ಎಂದು ವ್ಯಂಗ್ಯವಾಡಿದರು.
ವಿಚಾರಧಾರೆಯನ್ನ ಸುಡಲು ಆಗಲ್ಲ.. ಕಾಂಗ್ರೆಸ್ ಈ ನೆಲದ ವಿಚಾರಧಾರೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿದೆ. ಚಡ್ಡಿ ಸುಡುವುದರಿಂದ ನಮ್ಮ ವಿಚಾರಧಾರೆಯನ್ನ ಸುಡಲು ಆಗಲ್ಲ. ಕಾಂಗ್ರೆಸ್ ಚೆಡ್ಡಿ ಸುಡುತ್ತಿಲ್ಲ, ಅವರ ನೈತಿಕತೆ, ಚಿಂತನೆ ಏನೆಂದು ತೋರಿಸುತ್ತಿದೆ ಎಂದು ಕುಡಚಿ ಶಾಸಕ ಪಿ. ರಾಜೀವ್ ಹೇಳಿದ್ದಾರೆ.
ಅವರು ಚಡ್ಡಿಗೆ ಬೆಂಕಿ ಹಾಕ್ತಿಲ್ಲ, ಜನರ ಮನಸ್ಸು, ಹೃದಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಕಾಂಗ್ರೆಸ್ ಮನಸ್ಥಿತಿ ಎಷ್ಟು ವಿಕೃತ ಎಂದು ತೋರಿಸುತ್ತೆ. ಆರ್.ಎಸ್.ಎಸ್ ದೇಶಾಭಿಮಾನ, ರಾಷ್ಟ್ರೀಯತೆ ಭಾವನೆಯ ಹೃದಯ ಕಟ್ಟುವ ಕೆಲಸ ಮಾಡಿದೆ. ದೂರದಲ್ಲಿ ನಿಂತು ಏನೋ ಮಾತನಾಡೋದಲ್ಲ. ಹತ್ತಿರದಿಂದ ಬಂದು ನೋಡಿ. 1963 ರಲ್ಲಿ ನೆಹರು ರಾಜ್ ಪಥ್ನಲ್ಲಿ ಆರ್ಎಸ್ಎಸ್ ಇರಬೇಕು ಎಂದಿದ್ದರು.
ಇಂಡಿಯಾ-ಪಾಕಿಸ್ತಾನ ವಿಭಜನೆಯಾದಾಗ ನಿಂತವರು ಸ್ವಯಂ ಸೇವಕರು. ಭಾರತ-ಚೀನಾ ಯುದ್ಧವಾದಾಗ ಯುದ್ಧ ಭೂಮಿಯಲ್ಲಿ ಸೇವೆ ಮಾಡಿದವರು ಸ್ವಯಂ ಸೇವಕರು ಎಂದು ಕುಡಚಿ ಶಾಸಕ ಪಿ. ರಾಜೀವ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ: ಯಾವುದೇ ಪಕ್ಷಕ್ಕೆ ಹೋದ್ರೂ ಯಾವ ಜಾತಿ, ಎಷ್ಟು ದುಡ್ಡು ತರುತ್ತಿಯಾ? ಎಂದು ಕೇಳ್ತಾರೆ: ಬಸವರಾಜ್ ಹೊರಟ್ಟಿ