ಚಿಕ್ಕಮಗಳೂರು: ಅಯ್ಯನ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸಚಿವ ಸಿ ಟಿ ರವಿ ಹಾಗೂ ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ರು.
ಸುಮಾರು 2,036 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಅಯ್ಯನ ಕೆರೆ ಜಿಲ್ಲೆಯ ಕಡೂರು ತಾಲೂಕಿನ ಜೀವಕೆರೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಬರಗಾಲಕ್ಕೆ ತುತ್ತಾಗಿರುವ ಸುತ್ತಮುತ್ತಲ ಪ್ರದೇಶದಲ್ಲಿ ಈ ವರ್ಷ ಕೆರೆ ಕೋಡಿ ಬಿದ್ದಿರುವುದರಿಂದ ನಿಟ್ಟುಸಿರು ಜನರು ಬಿಟ್ಟಿದ್ದಾರೆ.
ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಸಚಿವ ಸಿ ಟಿ ರವಿ, ಈ ವರ್ಷ ಅಯ್ಯನ ಕೆರೆ ತುಂಬಿ ಹರಿದಿದ್ದು, ಆ ಕಾರಣಕ್ಕಾಗಿ ಗಂಗಮ್ಮನಿಗೆ ಪೂಜೆ ಸಲ್ಲಿಸಿದ್ದೇವೆ. ಪ್ರತಿ ವರ್ಷದಂತೆ ಈ ಬಾರಿಯೂ ಕೆರೆಯೊಡಲು ತುಂಬಿದ್ದು, ಭವಿಷ್ಯದಲ್ಲೂ ಇದೇ ರೀತಿ ತುಂಬಿ ಹರಿಯಲಿ ಎಂದು ಆಶಿಸಿದ್ರು. ಕೆರೆ ಅಭಿವೃದ್ದಿ ಕಾರ್ಯಕ್ಕಾಗಿ 2 ಕೋಟಿ ರೂ ಹಣ ಬಿಡುಗಡೆ ಮಾಡಿದ್ದು, ಪಕ್ಕದಲ್ಲಿರುವ ಶಕುನ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ 1.5 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ ಎಂದರು.