ಚಿಕ್ಕಮಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳ ಬಡ ಕುಟುಂಬದ ತಾಯಂದಿರಿಗೆ, ಹೆಣ್ಣುಮಕ್ಕಳಿಗೆ ಹಾಗೂ ಪುಟ್ಟ ಮಕ್ಕಳಿಗೆ ಪವಿತ್ರ ರಂಜಾನ್ ಹಬ್ಬ ಆಚರಣೆ ಸಹಾಯ ಹಸ್ತ ನೀಡಲು ಶಾಸಕ ಜಮೀರ್ ಖಾನ್ ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದು, ಡಿಜೆಹಳ್ಳಿ - ಕೆಜೆಹಳ್ಳಿ, ಪಾದರಾಯನಪುರದಲ್ಲೂ ಕಾಂಗ್ರೆಸ್ ಪಾತ್ರ ಹಾಗೇ ಇತ್ತು. ಅವರಿಗೆ ಹಣ, ವಕೀಲರ ನೇಮಕ ಎಲ್ಲ ಮಾಡಿದ್ದು ಕಾಂಗ್ರೆಸ್. ಆ ಸಂದರ್ಭದಲ್ಲಿ ಜಮೀರ್ ಹೆಸರು ಕೇಳಿ ಬಂದಿತ್ತು. ಈಗ ಹುಬ್ಬಳ್ಳಿ ಪ್ರಕರಣದಲ್ಲೂ ಜಮೀರ್ ಹೆಸರು ಕೇಳಿ ಬರುತ್ತಿದೆ. ಮಗು ಚಿವುಟಿ ತೊಟ್ಟಿಲು ತೂಗೋ ಕೆಲಸ ಮಾಡುತ್ತಿದ್ದಾರೆ ಎಂದರು.
ಕೋಮುಗಲಭೆ ಹುಟ್ಟುಹಾಕಿ ವೋಟ್ ಬ್ಯಾಂಕ್ ಗಟ್ಟಿಯಾಗಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಅವರಿಗೆ ನೆರವು ಕೊಡುವ ಪಾತ್ರ ಕಾಂಗ್ರೆಸ್ನದ್ದು ಇರಬಹುದು ಎಂಬ ಅನುಮಾನಕ್ಕೆ ಸಾಕ್ಷಿ ಒದಗಿಸುವ ರೀತಿ ಜಮೀರ್, ಕಾಂಗ್ರೆಸ್ ನಡವಳಿಕೆ ಇದೆ. ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಇದೆ ಅನ್ನೋ ಅನುಮಾನವಿತ್ತು. ಹಿಜಾಬ್ ಪರ ನಿಂತರು, ವಕೀಲರಿಗೆ ನೆರವು ಕೊಟ್ಟರು. ಅವರೆಲ್ಲ ಐದು - ಹತ್ತು ಸಾವಿರಕ್ಕೆ ಬರೋ ವಕೀಲರಲ್ಲ. ಎದ್ದು ನಿಂತರೆ 50 ಲಕ್ಷ ಬಿಲ್ ಮಾಡೊ ವಕೀಲರು. ಅವರೆಲ್ಲಾ ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದ ವಕೀಲರು. ಇದನ್ನೆಲ್ಲಾ ನೋಡಿದರೆ ಹಿಜಾಬ್, ಪಾದರಾಯನಪುರ, ಡಿಜೆಹಳ್ಳಿ-ಕೆಜೆಹಳ್ಳಿ, ಹುಬ್ಬಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ಪಾತ್ರ ಇರೋದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ತಾನು ಕಳ್ಳ ಪರರ ನಂಬ ಎಂಬ ಮಾತು ಕಾಂಗ್ರೆಸ್ ಅನ್ವಯವಾಗುತ್ತೆ. ತಿಪ್ಪೆ ಸಾರಿಸುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಬಿಜೆಪಿಯೂ ಹಾಗೇ ಎಂದು ಭಾವಿಸಿದ್ದಾರೆ. ಬಿಜೆಪಿ ತಿಪ್ಪೆ ಸಾರಿಸುವುದಾಗಿದ್ದರೆ ದಿವ್ಯಾ ಹಾಗರಗಿ ಮೇಲೆ ಎಫ್.ಐ.ಆರ್. ಆಗುತ್ತಿರಲಿಲ್ಲ. ಎಫ್.ಐ.ಆರ್. ಮಾಡಿದ್ದು, ಸಿಐಡಿಗೆ ವಹಿಸಿದ್ದು, ಅವರ ಗಂಡನನ್ನು ಬಂಧಿಸಿದ್ದು ಬಿಜೆಪಿ ಸರ್ಕಾರ. ಪ್ರಕರಣದಲ್ಲಿ ಇರುವ ಎಲ್ಲರನ್ನೂ ಬಂಧಿಸುತ್ತಿರುವುದು ಬಿಜೆಪಿ ಸರ್ಕಾರ. ಬಂಧನವಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ತೇವೆ ಎಂದಿದ್ದು ಬಿಜೆಪಿ. ಯುಪಿ ಮಾದರಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಪೇಪರ್ ನೋಟಿಫಿಕೇಶನ್ ಕೊಟ್ಟಿದ್ದು ಬಿಜೆಪಿ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಬಂಧಿತ ಆರೋಪಿಗಳ ಕುಟುಂಬಸ್ಥರಿಗೆ ಶಾಸಕ ಜಮೀರ್ ಸಹಾಯಹಸ್ತ!