ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ತಾಲೂಕಿನ ದತ್ತಪೀಠದ ಬಳಿ ನಡೆದಿದೆ. ದಿನ ನಿತ್ಯ ಚಿಕ್ಕಮಗಳೂರಿನಿಂದ ದತ್ತಪೀಠದ ಮಾರ್ಗವಾಗಿ ಸಂಚರಿಸುವ ಎಸ್ಎಂಎಸ್ ಟ್ರಾವೆಲ್ಸ್ ಎಂಬ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದಿದ್ದು, ಡ್ರೈವರ್ ಸೇರಿದಂತೆ ಬಸ್ನಲ್ಲಿದ್ದ ಏಳು ಜನರಿಗೂ ಗಂಭೀರ ಗಾಯಗಳಾಗಿವೆ.
ಬಸ್ನಲ್ಲಿ ಏಳು ಮಂದಿ ಪ್ರಯಾಣ ಮಾಡುತ್ತಿದ್ದು, ಅದೃಷ್ಟವಶಾತ್ ದೊಡ್ಡಮಟ್ಟದ ಸಾವು ನೋವು ಸಂಭವಿಸಿಲ್ಲ. ಮಾಹಿತಿ ತಿಳಿದ ಕೂಡಲೇ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ದತ್ತಪೀಠವು ನಾಲ್ಕೈದು ಕಿ.ಮೀ. ದೂರ ಇರುವಾಗಲೇ ಯೂಟರ್ನ್ ಆಕಾರದ ದೊಡ್ಡ-ದೊಡ್ಡ ತಿರುವುಗಳಿದ್ದು, ಲಾಂಗ್ ಚಾರ್ಸಿ ವಾಹನವಾಗಿದ್ದರಿಂದ ಈ ಅನಾಹುತ ಸಂಭವಿಸಿರುವ ಸಾಧ್ಯತೆಯಿದೆ. ಅಲ್ಲದೆ, ದತ್ತಪೀಠ-ಮುಳ್ಳಯ್ಯನಗಿರಿ ಭಾಗದಲ್ಲಿ ಆಗಾಗ್ಗೆ ಮಳೆ ಕೂಡ ಸುರಿಯುತ್ತಿದ್ದು, ಗುಡ್ಡದ ಮಣ್ಣು ರಸ್ತೆಯಲ್ಲಿ ನಿಂತಿದ್ದರಿಂದ ತಿರುವಿನಲ್ಲಿ ಬಸ್ ಟರ್ನ್ ಆಗುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಬಸ್ ರಸ್ತೆ ಬದಿಯ ಸುಮಾರು 50 ಅಡಿ ಆಳದ ಕಂದಕಕ್ಕೆ ಪಲ್ಟಿಯಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ರಕರ್ತೆ ಮೃತದೇಹ ಪತ್ತೆ.. ಪತಿ ಮೇಲೆ ಗುಮಾನಿ