ಚಿಕ್ಕಮಗಳೂರು: ನಿರ್ಮಾಣ ಹಂತದ ಕಟ್ಟಡದ ಸಮೀಪ ನಿರ್ಮಿಸಿದ್ದ ನೀರಿನ ತೊಟ್ಟಿಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದಲ್ಲಿ ಸಂಭವಿಸಿದೆ. ಸುನಿಲ್ ಡಿಕುನ್ನಾ ಮತ್ತು ರಿನಿಟಾ ಎಂಬವರ ಪುತ್ರ ಆಶಿರ್ (9 ವರ್ಷ) ಮೃತಪಟ್ಟ ಬಾಲಕ. ಚಿನ್ನಿಗ ಪ್ರೌಢಶಾಲೆಯ ಆವರಣದಲ್ಲಿ ನೂತನವಾಗಿ ಮೊರಾರ್ಜಿ ವಸತಿ ಶಾಲಾ ಕಟ್ಟಡದ ನಿರ್ಮಾಣಕ್ಕೆ ನೀರಿನ ವ್ಯವಸ್ಥೆಗೆಂದು ತಾತ್ಕಾಲಿಕವಾಗಿ ಟಾರ್ಪಲ್ ಹಾಕಿ ನೀರಿನ ಹೊಂಡ ನಿರ್ಮಿಸಲಾಗಿತ್ತು. ಆಶಿರ್ ತನ್ನ ಸ್ನೇಹಿತರೊಂದಿಗೆ ಶಾಲಾ ಅವರಣದಲ್ಲಿ ಆಟವಾಡಲು ತೆರಳಿದ್ದಾಗ ದುರ್ಘಟನೆ ಜರುಗಿದೆ.
ಆಶೀರ್ ಮೂಡಿಗೆರೆ ಬೆಥನಿ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿಗಳು ಹೆಚ್ಚಾಗಿ ಓಡಾಡುವ ಸ್ಥಳದಲ್ಲಿ ಯಾವುದೇ ಸುರಕ್ಷಿತ ಕ್ರಮಗಳನ್ನು ಅನುಸರಿಸದೇ ನೀರಿನ ತೊಟ್ಟಿ ನಿರ್ಮಾಣ ಮಾಡಿದ್ದ ಕಟ್ಟಡ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀನು ಹಿಡಿಯಲು ತೆರಳಿ ಕೆರೆಯಲ್ಲಿ ಮುಳುಗಿ ಸಾವು: ತುಮಕೂರಿನಲ್ಲಿ ಜುಲೈ 22ರಂದು ಈ ಘಟನೆ ನಡೆದಿತ್ತು. ಗುಬ್ಬಿ ತಾಲೂಕಿನ ಕಡಬ ಗ್ರಾಮದ ಕೆರೆಗೆ ಯುವಕರಿಬ್ಬರು ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಇಬ್ಬರೂ ಇಬ್ಬರೂ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಕೂಲಡಲೇ ಸುತ್ತಮುತ್ತಲಿದ್ದ ಯುವಕರು ಪಾರು ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗುಬ್ಬಿ ತಾಲೂಕಿನ ಆಡುಗೊಂಡನಹಳ್ಳಿ ಗ್ರಾಮದ ಹರೀಶ್ (31) ಯೋಗೀಶ್ (36) ಮೃತರು.
ಅಣೆಕಟ್ಟೆಯಲ್ಲಿ ಮುಳುಗಿ ಐವರು ಸಾವು: ಗುಜರಾತ್ನಗರದ ಹೊರವಲಯದಲ್ಲಿರುವ ಸಪ್ದಾ ಅಣೆಕಟ್ಟೆಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಐವರು ಮುಳುಗಿ ಸಾವನ್ನಪ್ಪಿದ ಘಟನೆ ಜುಲೈ 29ರಂದು ನಡೆದಿತ್ತು. ಮಹೇಶಭಾಯ್ ಕರಾಭಾಯಿ ಮಾಂಗೆ (44), ಲಿನಾಬೆನ್ ಮಹೇಶಭಾಯ್ ಮಾಂಗೆ (41), ಸಿದ್ಧ ಮಹೇಶಭಾಯ್ ಮಾಂಗೆ (20), ಅನಿತಾಬೆನ್ ವಿನೋದಭಾಯ್ ದಾಮಾ (40), ರಾಹುಲ್ ವಿನೋದಭಾಯಿ ದಾಮಾ ಮೃತರು. ಸಾವನ್ನಪ್ಪಿದವರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಲಾಗಿತ್ತು. ಈ ಘಟನೆ ಕುರಿತು ಹೆಚ್ಚಿನ ವಿವರ ಓದಲು ಈ ಲಿಂಕ್ ಕ್ಲಿಕ್ ಮಾಡಿ- ಪ್ರವಾಸಕ್ಕೆಂದು ಬಂದಿದ್ದ ಐವರು ಅಣೆಕಟ್ಟೆಯಲ್ಲಿ ಮುಳುಗಿ ಸಾವು.. ಒಟ್ಟಿಗೆ ಅಂತ್ಯಕ್ರಿಯೆ