ಚಿಕ್ಕಮಗಳೂರು: ಸರ್ವೋದಯ ಮಂಡಲ, ಜಿಲ್ಲಾ ಮಾಧ್ಯಮ ಸಂಘ, ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ರಕ್ತನಿಧಿಯಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ. ಹೆಚ್.ಎಲ್.ನಾಗರಾಜ್ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಡಾ. ಹೆಚ್.ಎಲ್.ನಾಗರಾಜ್, ರಕ್ತದ ಕೊರತೆಯಿಂದ ಯಾವ ವ್ಯಕ್ತಿಯೂ ಬಳಲಬಾರದು. ರಕ್ತದಾನ ಎನ್ನುವುದು ಮಾನವೀಯ ನೆಲೆಗಟ್ಟಿನಲ್ಲಿ ಬಹಳ ಮುಖ್ಯವಾದದ್ದು ಎಂದರು.
ಈ ಮಹತ್ಕಾರ್ಯಕ್ಕೆ ಯುವ ಜನಾಂಗ, ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಮುಂದಾಗಬೇಕು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಕಣ್ಣೀರಿಗಿಂತ ರಕ್ತದಾನ ಮಾಡುವುದು ಶ್ರೇಷ್ಠವಾಗಿದೆ. ಆಪತ್ತಿನಲ್ಲಿ ರಕ್ತ ನೀಡಿ ರಕ್ಷಣೆ ಮಾಡುವ ಮೂಲಕ ಪ್ರಾಣ ಹಾನಿ ತಡೆಗಟ್ಟಬಹುದಾಗಿದೆ ಎಂದರು.
18ರಿಂದ 60 ವರ್ಷದೊಳಗಿನ ಆರೋಗ್ಯವಂತರು ಯಾವುದೇ ಅಡ್ಡಿ ಆತಂಕವಿಲ್ಲದೆ ಮೂರು ತಿಂಗಳಿಗೊಮ್ಮೆ ನಿರಂತರವಾಗಿ ರಕ್ತದಾನ ಮಾಡಬಹುದಾಗಿದೆ. ಆದರೆ ರಕ್ತದಾನವೆಂಬುದು ಇಂದು ವ್ಯಾಪಾರೀಕರಣವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.