ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಹೆಸರಾಂತ ಬಿಂಡಿಗಾ ದೇವಿರಮ್ಮನ ದೀಪಾವಳಿ ಜಾತ್ರಾ ಮಹೋತ್ಸವ ಇದೇ ತಿಂಗಳು 13 ರಿಂದ 17 ರ ವರೆಗೂ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ, ಬರಿಗಾಲಿನಲ್ಲಿಯೇ ಬೆಟ್ಟವೇರಿ ದೇವಿರಮ್ಮನ ದರ್ಶನ ಪಡೆಯುವುದು ವಾಡಿಕೆ.
ಆದರೆ, ಈ ಬಾರಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನಲೆ ದೇವಸ್ಥಾನದ ಆಡಳಿತ ಮಂಡಳಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ಸರ್ಕಾರದ ಆದೇಶದಂತೆಯೇ ಜಾತ್ರೆ ನಡೆಸಲು ಆಡಳಿತ ಮಂಡಳಿ ತೀರ್ಮಾನ ಮಾಡಿದೆ. ದೇವರಿಗೆ ಬೆಟ್ಟದ ಮೇಲೆ ಪುರೋಹಿತರಿಂದ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ಪದ್ಧತಿ ಪ್ರಕಾರವೇ ನಡೆಯಲಿದೆ. ಕೊರೊನಾ ಸೋಂಕು ಹರಡುವಿಕೆಯ ಹಿನ್ನೆಲೆ ಬೆಟ್ಟ ಏರಲು ಗ್ರಾಮಸ್ಥರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ಹೊರಗಿನ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.