ಚಿಕ್ಕಮಗಳೂರು: ಪ್ರಕೃತಿಯ ಸೊಬಗಿಗೆ ಹೆಸರುವಾಸಿ ಮಲೆನಾಡು. ಇಲ್ಲಿನ ಪ್ರಕೃತಿ ಸೌಂದರ್ಯದ ಮಧ್ಯೆ ಹೃದಯಾಕಾರದ ಹಚ್ಚ ಹಸಿರಿನ ಜಾಗ ಎಲ್ಲರ ಗಮನ ಸೆಳೆಯುತ್ತಿದೆ. ಇದು ಮೂಡಿಗೆರೆ ತಾಲೂಕಿನ ಕಳಸ ಬಳಿಯ ಸಂಸೆ ಸಮೀಪದ ಬಾಮಿಕೊಂಡ ಎಂಬ ಚಿಕ್ಕ ಹಳ್ಳಿಯಲ್ಲಿದೆ.
ಕುದುರೆಮುಖದ ಸಾಲು ಸಾಲು ಬೆಟ್ಟಗಳ ಮಧ್ಯೆ ಈ ಸ್ಥಳ ಎಲ್ಲರ ಕಣ್ಮನ ಸೆಳೆಯುತ್ತಿದೆ. ಎತ್ತರವಾದ ಬೆಟ್ಟದ ಮೇಲಿನ ಹರಿಯುವ ನೀರಿನ ಮಧ್ಯೆ ಇರುವ ಹೃದಯಾಕಾರದ ಹಚ್ಚ ಹಸಿರಿನ ಜಾಗ ಆಕರ್ಷಣೀಯವಾಗಿದೆ. ಸುಮಾರು ಎರಡು-ಮೂರು ತಲೆಮಾರುಗಳಿಂದ ಇಲ್ಲಿನ ರೈತ ಕೃಷ್ಣಪ್ಪ ಹಾಗೂ ಆತನ ಕುಟುಂಬಸ್ಥರು ಈ ಬೆಟ್ಟದ ಸುತ್ತ ಕೃಷಿ ಮಾಡುತ್ತಾ ಭತ್ತ ಬೆಳೆಯುತ್ತಿದ್ದಾರೆ. ಯಾವುದೇ ರೀತಿಯ ಉಪಕರಣ ಬಳಸದೆ ಕೇವಲ ಎತ್ತುಗಳನ್ನು ಬಳಸಿ ಕೃಷಿ ಮಾಡುತ್ತಿರುವುದೇ ವಿಶೇಷ.
ಎತ್ತರದ ಬೆಟ್ಟಗಳ ಸುತ್ತ ಇರುವ ಜಾಗದಲ್ಲಿ ಕೆಸರು ಗದ್ದೆಯನ್ನು ನಿರ್ಮಾಣ ಮಾಡಿ ಅಲ್ಲಿ ನಾಟಿ ಮಾಡಿದ್ದಾರೆ. ಎತ್ತರ ಬೆಟ್ಟಗಳ ಮೇಲೆ ಮೆಟ್ಟಿಲುಗಳ ರೀತಿ ಪಾತಿ ಮಾಡಿ ಭತ್ತದ ಗದ್ದೆ ಮಾಡಲಾಗಿದ್ದು, ಈ ಜಾಗಕ್ಕೆ ಜೀವ ತುಂಬುವ ಕೆಲಸ ರೈತ ಮಾಡಿದ್ದಾನೆ. ಪುಟ್ಟ ಗ್ರಾಮದಲ್ಲಿರುವ ಈ ಪ್ರಕೃತಿ ಸೌಂದರ್ಯಕ್ಕೆ ನಿಜಕ್ಕೂ ಪ್ರತಿಯೊಬ್ಬರೂ ತಲೆದೂಗಲೇಬೇಕು.
ಈ ಬೆಟ್ಟದ ಸುತ್ತ ರೈತ ಕೃಷ್ಣಪ್ಪ ಪ್ರಕೃತಿಯ ಶೃಂಗಾರ ಮಾಡಿ, ತಮಗೆ ಇರುವ ನಾಲ್ಕು ಎಕರೆ ಭೂಮಿಯಲ್ಲಿ ಉಳುಮೆ ಮಾಡಿ ಭತ್ತದ ನಾಟಿ ಮಾಡುತ್ತಿದ್ದಾರೆ. ಈ ಬೆಟ್ಟದ ಮೇಲ್ಭಾಗದಲ್ಲಿ ಹೃದಯಾಕಾರದಲ್ಲಿ ಜಾಗವನ್ನು ಬಿಟ್ಟು ಮಿಕ್ಕ ಜಾಗದಲ್ಲಿ ನಾಟಿ ಮಾಡಲಾಗುತ್ತಿದೆ. ಈ ಜಾಗ ಕೆಸರಿನ ಮಧ್ಯೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಕಳಸ ನಗರದಿಂದ ಕುದುರೆಮುಖ ಮಾರ್ಗದಲ್ಲಿ ಈ ಗ್ರಾಮವಿದ್ದು, ಈ ಭತ್ತದ ಗದ್ದೆಯ ಜಾಗ ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಲು ಕಲ್ಲು, ಮಣ್ಣನ ದಾರಿಯಲ್ಲಿ ನಾಲ್ಕು ಕೀ.ಮೀ. ಸಾಗಬೇಕು. ಈ ಗ್ರಾಮದಲ್ಲಿ ಮೂರು ನಾಲ್ಕು ಕುಟುಂಬಗಳು ಮಾತ್ರ ವಾಸವಾಗಿದ್ದು, ಅವರಿಗೂ ಕಾಲ್ನಡಿಗೆಯೇ ಅನಿವಾರ್ಯವಾಗಿದೆ.