ಚಿಕ್ಕಮಗಳೂರು: ರಕ್ತಸಿಕ್ತ ಕೈಗಳನ್ನು ಯಾವ ಪುಣ್ಯ ಕಾರ್ಯದಿಂದಲೂ ತೊಳೆದುಕೊಳ್ಳಲು ಆಗುವುದಿಲ್ಲ. ನಿಮ್ಮ ಕೈಗಳು ರಕ್ತಸಿಕ್ತವಾಗಿದ್ದು, ಇಂತಹ ರಕ್ತಸಿಕ್ತ ಕೈಗಳಿಂದ ಅಧಿಕಾರ ನಡೆಸಿದರೆ ಪಾಪ ಹೆಚ್ಚಾಗುತ್ತದೆಯೇ ವಿನಾ ಪುಣ್ಯ ಬರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಪೂರ್ವದಲ್ಲೂ ದೌರ್ಜನ್ಯದ ಮೂಲಕ ಚುನಾವಣೆ ನಡೆಸಲು ಮುಂದಾದ್ರು. ಅದಕ್ಕೆ ಅವಕಾಶ ಸಿಗಲಿಲ್ಲ. ಈಗ ದೌರ್ಜನ್ಯದ ಮೂಲಕ ಬಿಜೆಪಿ ಬೆಳವಣಿಗೆಯನ್ನ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದೀರಾ? ಇದನ್ನ ನಾವು ಖಂಡಿಸುತ್ತೇವೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಕಳೆದ 72 ಗಂಟೆಗಳಲ್ಲಿ ಬಿಜೆಪಿ ಕಚೇರಿಯನ್ನ ಸುಟ್ಟು, ಮನೆಗಳಿಗೆ ಬೆಂಕಿ ಹಾಕಿ, ಕಾರ್ಯಕರ್ತರ ಅಂಗಡಿ ಲೂಟಿ ಮಾಡಿ, 12ಕ್ಕೂ ಹೆಚ್ಚು ಕಾರ್ಯಕರ್ತರನ್ನ ಹತ್ಯೆ ಮಾಡಿದ್ದಾರೆ. ಈಗಾಗಲೇ 281ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದಂತಹ ಪಶ್ಚಿಮ ಬಂಗಾಳ ಸರ್ಕಾರವೇ ಗೂಂಡಾಗಳಿಗೆ ಬೆಂಬಲವಾಗಿ ನಿಂತಿದೆ. ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತನೆ ಮಾಡುತ್ತಿದ್ದಾರೆ. ಇದನ್ನ ಖಂಡಿಸಿ ಬಿಜೆಪಿ ದೇಶಾದ್ಯಂತ ಸಾಂಕೇತಿಕ ಪ್ರತಿಭಟನೆಗೆ ಮುಂದಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ನೈತಿಕ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ನಾವು ಪ್ರಜಾಪ್ರಭುತ್ವದ ತೀರ್ಪನ್ನು ಗೌರವಿಸಿ, ಅಭಿವೃದ್ಧಿಗೆ ಸಹಕಾರ ಕೊಡುತ್ತೇವೆ ಎಂದಿದ್ದೇವೆ ಎಂದರು.
ಬಿಜೆಪಿ ಯಾವತ್ತೂ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ವರ್ತಿಸಿಲ್ಲ. ಆದರೆ, ಹತ್ಯೆಯ ಮೂಲಕ ಒಂದು ರಾಜಕೀಯ ಪಕ್ಷದ ಧ್ವನಿಯನ್ನ ಹತ್ತಿಕ್ಕಬಹುದು ಎಂಬ ದುಷ್ಟ ಆಲೋಚನೆ ಸರಿಯಲ್ಲ. ಶ್ಯಾಂಪ್ರಸಾದ್ ಮುಖರ್ಜಿ, ದೀನ ದಯಾಳ್ ಅವರನ್ನ ಹತ್ಯೆ ಮಾಡಿದರು. ಬಿಜೆಪಿ ಬೆಳವಣಿಗೆ ತಡೆಯಲು ಆಗಲಿಲ್ಲ. ಹತ್ಯೆ ಮೂಲಕ ಪಕ್ಷದ ಬೆಳವಣಿಗೆ ತಡೆಯಲು ಸಾಧ್ಯವಿಲ್ಲ. ಪಕ್ಷ ಮತ್ತೆ ಹತ್ತು ಪಟ್ಟು ಸಾಮರ್ಥ್ಯದಿಂದ ಮೇಲೆದ್ದು ನಿಲ್ಲುತ್ತೆ ಎಂದ ಅವರು, ಹತ್ಯಾ ರಾಜಕಾರಣ ಕೊನೆಯಾಗಬೇಕು ಎಂದು ಆಗ್ರಹಿಸಿದರು.