ಚಿಕ್ಕಮಗಳೂರು : ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ ಪಂಚಾಯತ್ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಹೊರ ಜಿಲ್ಲೆ ಮತ್ತು ರಾಜ್ಯದಿಂದ ಗ್ರಾಮಕ್ಕೆ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಆಗಲೇಬೇಕು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಇಲ್ಲಿನ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಂಡು ನಂತರ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ಆಗಲೇಬೇಕು ಎಂದೂ ಗ್ರಾಮದಲ್ಲಿ ತಮಟೆ ಸಾರುವುದರ ಮೂಲಕ ಜನರಿಗೆ ಮಾಹಿತಿ ನೀಡಿದೆ.
ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಈ ಸೂಚನೆ ನೀಡಲಾಗಿದೆ. ಇಲ್ಲಿನ ಕಾಮೇನಹಳ್ಳಿ ಸೇರಿ ಸುತ್ತಮುತ್ತ ಗ್ರಾಮದಲ್ಲಿ ತಮಟೆ ಬಾರಿಸಿ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಬೆಂಗಳೂರು, ಮೈಸೂರು, ಮುಂಬೈನಂತಹ ಪ್ರದೇಶಗಳಿಂದ ಬಂದವರ ಮೇಲೆ ಹೆಚ್ಚು ನಿಗಾವಹಿಸಬೇಕು ಎಂದಿದೆ. ಒಂದು ವೇಳೆ ಕ್ವಾರಂಟೈನ್ ಉಲ್ಲಂಘಿಸಿದ್ರೇ ದಂಡ ವಿಧಿಸುವ ಎಚ್ಚರಿಕೆಯನ್ನು ಗ್ರಾಪಂ ನೀಡಿದೆ.