ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಆಲ್ಟೋ ಕಾರು ಡಿಕ್ಕಿ ಹೊಡೆದಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
ಕೇರಳ ಮೂಲದ ಆಲ್ಟೋ ಕಾರು ಮಂಗಳೂರು ಕಡೆಯಿಂದ ಚಿಕ್ಕಮಗಳೂರು ಭಾಗಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದ್ದು, ಒಂದು ವೇಳೆ ರಸ್ತೆಯ ಬದಿಯಲ್ಲಿ ಡಿವೈಡರ್ ಇರದಿದ್ದರೆ ಕಾರು ಸುಮಾರು 300 ಅಡಿ ಆಳದ ಚಾರ್ಮಾಡಿ ಘಾಟಿ ಪ್ರಪಾತಕ್ಕೆ ಬೀಳುತ್ತಿತ್ತು. ಕಾರಿನ ಚಾಲಕ ಬದುಕುಳಿಯುವ ಸಂಭವ ತೀರಾ ಕಡಿಮೆ ಇತ್ತು ಎನ್ನಲಾಗಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಡಿವೈಡರ್ ಇದ್ದ ಕಾರಣ ಚಾಲಕ ಡಿವೈಡರ್ಗೆ ಗುದ್ದಿ ಪಾರಾಗಿದ್ದಾನೆ.
ಇನ್ನು ಕಾರು ಗುದ್ದಿದ ರಭಸಕ್ಕೆ ಡಿವೈಡರ್ ಸಂಪೂರ್ಣ ಕಳಚಿ ಬಿದ್ದು, ಕಾರಿನ ಮುಂಭಾಗ ಕೂಡ ಸಂಪೂರ್ಣ ಜಖಂಗೊಂಡಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.