ಚಿಕ್ಕಮಗಳೂರು: ಮುಂಬರುವ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡ ಈ ಬಾರಿ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಜನವರಿ ಮೊದಲ ವಾರದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕ್ಷೇತ್ರವನ್ನು ಪ್ರಮೋದ್ ಮುತಾಲಿಕ್ ಘೋಷಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮಸೇನೆ ಅಧ್ಯಕ್ಷ ಮುತಾಲಿಕ್, ಐದಾರು ಬಾರಿ ರಾಜ್ಯ ಪ್ರವಾಸ ಮಾಡಿದ್ದೇನೆ. ಏಳೆಂಟು ಕ್ಷೇತ್ರಗಳಲ್ಲಿ ಚರ್ಚೆ ನಡೆಯುತ್ತಿದೆ. ನಾನು ಘೋಷಣೆ ಮಾಡಿ ಪ್ರಚಾರವನ್ನೇ ಆರಂಭಿಸಿಲ್ಲ. ಈಗಲೇ ಕೆಲವರಿಗೆ ಭಯದ ವಾತಾವರಣ ಹುಟ್ಟಿದೆ. ನನ್ನ ಜೊತೆ ಓಡಾಡುವವರ ಮೇಲೆ ಕೇಸ್ ಹಾಕುತ್ತಿದ್ದಾರೆ. ನಮ್ಮನ್ನು ಹೆದರಿಸಿ - ಬೆದರಿಸುವ ಪ್ರಯತ್ನ ಬೇಡ ಎಂದರು. ಹಿಂದುತ್ವದಲ್ಲಿ ಉಡುಪಿ-ಮಂಗಳೂರಲ್ಲಿ ಒಳ್ಳೆ ವಾತಾವರಣವಿದೆ. ಜನವರಿ ಮೊದಲ ವಾರದಲ್ಲಿ ಅಧಿಕೃತವಾಗಿ ಪ್ರಕಟಿಸುವುದಾಗಿ ಹೇಳಿದರು.
ಗಡಿ ವಿಚಾರ ರಾಜಕೀಯ ಪ್ರೇರಿತ.. ಬೆಳಗಾವಿ ಗಡಿ ವಿಚಾರವಾಗಿ ಮಾತನಾಡಿದ್ದು, ಗಡಿ ವಿವಾದ ರಾಜಕೀಯ ಪ್ರೇರಿತವಾದದ್ದು. ಬೆಳಗಾವಿಯಲ್ಲಿ ಕನ್ನಡಿಗರು - ಮರಾಠಿಗರು ಸಹೋದರರಂತೆ ಇದ್ದಾರೆ. ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಕರ್ನಾಟಕ - ಮಹಾರಾಷ್ಟ್ರದ ರಾಜಕೀಯ ನಾಯಕರು ಕಿಡಿ ಹಚ್ಚುತ್ತಿದ್ದಾರೆ. ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ, ಈಗ ಅದರ ಬಗ್ಗೆ ಮಾತನಾಡಿದರೆ ನ್ಯಾಯಾಂಗ ನಿಂದನೆ ಆಗುತ್ತೆ.
ಮಹಾರಾಷ್ಟ್ರ ಬಿಜೆಪಿ - ಕಾಂಗ್ರೆಸ್ ಬೆಳಗಾವಿ ಮಹಾರಾಷ್ಟ್ರದ್ದು ಅಂತಾರೆ. ಕರ್ನಾಟಕ ಬಿಜೆಪಿ-ಕಾಂಗ್ರೆಸ್ ಬೆಳಗಾವಿ ಕರ್ನಾಟಕದ್ದು ಅಂತಾರೆ. ರಾಷ್ಟ್ರೀಯ ಪಕ್ಷಗಳೇ ದ್ವಂದ್ವ ನಿಲುವು ಹೇಗೆ ತೆಗೆಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟಿನಿಂದ ತೀರ್ಪು ಬರುವವರೆಗೂ ಬಾಯಿ ಮುಚ್ಚಿಕೊಂಡು ಇರುವುದು ಉತ್ತಮ ಎಂದು ಮುತಾಲಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಗಡಿ ವಿವಾದ ನಿಲುವಳಿ ಸೂಚನೆ ಮಂಡಿಸಿದ ಮಹಾ ಸರ್ಕಾರ.. ಸರ್ವಪಕ್ಷಗಳಿಂದ ಒಮ್ಮತದ ಅಂಗೀಕಾರ