ಬೆಂಗಳೂರು, ಚಿಕ್ಕಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟದ ರಸ್ತೆ ಅಗಲೀಕರಣ ವಿಚಾರದ ಕುರಿತು ರಾಜ್ಯ ಸರ್ಕಾರಕ್ಕೆ ಉತ್ತರಿಸಲು ಶುಕ್ರವಾರ ಹೈಕೋರ್ಟ್ ನೋಟಿಸ್ ನೀಡಿದೆ.
ಮುಳ್ಳಯ್ಯನಗಿರಿ ಬೆಟ್ಟದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ತಡೆಯಾಜ್ಞೆ ಹೊರಡಿಸುವಂತೆ ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ಪಿಐಎಲ್ ಅರ್ಜಿ ಸಲ್ಲಿಸಿತ್ತು. ಈ ಕುರಿತು ಶುಕ್ರವಾರ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠದಲ್ಲಿ ಸರ್ಕಾರದಿಂದ ಉತ್ತರ ಕೋರಿ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.
ಮುಳ್ಳಯ್ಯನಗಿರಿಯಿಂದ-ಸೀತಾಳಯ್ಯನಗಿರಿವರೆಗೆ ರಸ್ತೆ ನಿರ್ಮಾಣ ಆಗುತ್ತಿದೆ. ಈ ರಸ್ತೆ ಕಾಮಗಾರಿಯಿಂದ ಬೆಟ್ಟದ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೇ ಮುಳ್ಳಯ್ಯನಗಿರಿ ಬೆಟ್ಟದ ಸ್ವರೂಪವೂ ಸಹ ಹಾಳಾಗುವ ಸಾಧ್ಯತೆ ಇದೆ. ರಸ್ತೆ ನಿರ್ಮಾಣವಾದರೆ ವಾಹನಗಳ ಸಂಚಾರದಿಂದ ಪ್ರಾಣಿಗಳಿಗೆ ಕಿರಿಕಿರಿಯಾಗುತ್ತದೆ. ಅದಕ್ಕಾಗಿ ರಸ್ತೆ ಅಗಲೀಕರಣಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸುವಂತೆ ಮನವಿ ಮಾಡಲಾಗಿತ್ತು.