ಚಿಕ್ಕಮಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಭೂಪನನ್ನು ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 40 ಕ್ಕೂ ಹೆಚ್ಚು ಜನರಿಗೆ 2 ಕೋಟಿಗೂ ಅಧಿಕ ಹಣವನ್ನು ಬಂಧಿತ ಆರೋಪಿ ವಂಚಿಸಿದ್ದು, ಇಂಡಿಯನ್ ಪೋಸ್ಟ್, ಇಸ್ರೋ, ಮೆಸ್ಕಾಂ, ಪಿಯುಸಿ, ಎಸ್ಎಸ್ಎಲ್ಸಿ ಬೋರ್ಡ್ ನಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಮಾಡಿದ್ದಾನೆ. ಬಂಧಿತ ಆರೋಪಿ ವಂಚನೆ ಮಾಡಿದ ದುಡ್ಡಲ್ಲಿ ಐಶಾರಾಮಿ ಜೀವನವನ್ನು ನಡೆಸುತ್ತಿದ್ದು, ವಂಚನೆ ದುಡ್ಡಲ್ಲಿ ತಿರುಪತಿ ತಿಮ್ಮಪ್ಪನಿಗೆ 5 ಲಕ್ಷ ರೂ. ಕಾಣಿಕೆ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಹೊರ ಬಿದ್ದಿದೆ.
ಬಂಧಿತ ಆರೋಪಿ ಪ್ರಭಾಕರ್ ಹೆಲಿಕಾಪ್ಟರ್ನಲ್ಲೇ ತೀರ್ಥಯಾತ್ರೆ ನಡೆಸಿದ್ದು, 48 ಅಭ್ಯರ್ಥಿಗಳ ಮೂಲ ದಾಖಲೆಯನ್ನು ಈ ವ್ಯಕ್ತಿಯನ್ನು ಬಂಧಿಸುವ ವೇಳೆ ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಭಾಕರ್ ಬೆಂಗಳೂರು ಮೂಲದ ಬಂಧಿತ ಆರೋಪಿಯಾಗಿದ್ದು, ರಾಜ್ಯಾದ್ಯಂತ ನೂರಾರು ಯುವಕ - ಯುವತಿಯರಿಗೆ ವಂಚನೆ ಮಾಡಿರಬಹುದು ಎಂದೂ ಶಂಕಿಸಲಾಗುತ್ತಿದೆ.
ಈ ಬಂಧಿತ ಆರೋಪಿ ನಿರುದ್ಯೋಗಿ ಯುವಕ - ಯುವತಿಯರಿಗೆ ನಕಲಿ ಆಫರ್ ಲೆಟರ್ ನೀಡಿ ಒಬ್ಬೊಬ್ಬರಿಂದ 10-15 ಲಕ್ಷ ಪೀಕುತ್ತಿದ್ದ. ಈ ಕುರಿತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು ಮಾಡಲಾಗಿತ್ತು. ಸದ್ಯ ನಗರ ಠಾಣೆಯ ಪೊಲೀಸರು ಈತನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.