ಚಿಕ್ಕಮಗಳೂರು: ಕಳೆದೆರಡು ದಿನಗಳ ಹಿಂದೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ (ಮಂಜು ಕವಿದಿದ್ದ ವಾತಾವರಣ ಕಾರಣ ) ತಪ್ಪಿ ಸ್ವಿಫ್ಟ್ ಕಾರೊಂದು ಮಗುಚಿ ಬಿದ್ದಿತ್ತು. ಕಾರಿನಲ್ಲಿದ್ದ ಐವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ವೇಳೆ ಕಾರಿನಲ್ಲಿದ್ದ ಅಮೂಲ್ಯ ದಾಖಲೆಗಳು ಗಾಳಿಯಲ್ಲಿ ಹಾರಿ ಹೋಗಿದ್ದವು. ಆ ದಾಖಲೆಗಳು ಬಹಳ ಮುಖ್ಯವಾಗಿರೋದು ಎಂದು ಕಾರಿನಲ್ಲಿದ್ದವರು ಕೇಳಿಕೊಂಡಾಗ, ಸ್ಥಳೀಯ ಸಮಾಜ ಸೇವಕ ಆರೀಫ್ ತನ್ನ ಜೀವದ ಹಂಗು ತೊರೆದು ಕ್ರೇನ್ ಮೂಲಕ ನೇತಾಡಿಕೊಂಡು ಚಾರ್ಮಾಡಿ ಘಾಟಿಯ ಪ್ರಪಾತಕ್ಕೆ ಇಳಿದು ದಾಖಲೆಗನ್ನು ಕಾರಿನಲ್ಲಿದ್ದ ವ್ಯಕ್ತಿಗೆ ಹಿಂದಿರುಗಿಸಿ ಸಾಹಸ ಮೆರೆದಿದ್ದಾರೆ. ಅವರ ಈ ಸಾಹಸಿ ಪ್ರವೃತ್ತಿಗೆ ಕಾರಿನಲ್ಲಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ.
ಒಂದೆಡೆ ಕಾರಿನಲ್ಲಿದ್ದ ದಾಖಲೆಗಳನ್ನು ಹುಡುಕಲು ಆರೀಫ್ ತೆಗೆದುಕೊಂಡ ರಿಸ್ಕ್ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಇಂತಹ ರಿಸ್ಕ್ ಬೇಕಿತ್ತಾ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಒಂದು ವೇಳೆ, ಆರೀಫ್ ಜೀವಕ್ಕೆ ಹೆಚ್ಚುಕಮ್ಮಿಯಾಗಿದ್ದರೆ ಜವಾಬ್ದಾರಿ ಯಾರು ಎಂಬ ಮಾತುಗಳು ಕೇಳಿ ಬಂದಿವೆ.
ಆದ್ರೆ ಜೀವದ ಹಂಗು ತೊರೆದು ದಾಖಲೆ ತಂದು ಕೊಟ್ಟ ಆರೀಫ್ ಸಾಹಸ ಮೆಚ್ಚಲೇಬೇಕು. ಸಾರ್ವಜನಿಕ ವಲಯದಲ್ಲಿಯೂ ಕೂಡ ಆರಿಫ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.