ಚಾಮರಾಜನಗರ: ಬೈಕ್ ಸವಾರರ ಮೇಲೆ ದಾಳಿಯಿಡಲು ಬಂದ ಹುಲಿರಾಯನ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ 'ನಿಖಿಲ್ ಎಲ್ಲಿದ್ದಿಯಪ್ಪ' ಸಂಭಾಷಣೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ವದಾದ್ಯಂತ ಹರಡಿತ್ತು. ಅದೇ ಮಾದರಿಯಲ್ಲಿ ಬೈಕ್ ಸವಾರನ ಬೆನ್ನಟ್ಟುತ್ತಿರುವ ಹುಲಿಯ ವಿಡಿಯೋ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಸ್ಟೇಟಸ್ ಸೇರಿದಂತೆ ಇತರೆಡೆ ಹರಿದಾಡುತ್ತಿದೆ.
ಜಗತ್ತಿನಲ್ಲಿ ಅತಿಹೆಚ್ಚು ಓದಲ್ಪಡುವ ಹಾಗೂ ಓದುಗರು ಸೂಚಿಸುವ ಸುದ್ದಿ ಮತ್ತು ವಿಡಿಯೋ ತುಣಕುಗಳನ್ನು ಅಪ್ಲೋಡ್ ಆಗುವ 'ಡಿಗ್ಗ್' ನ್ಯೂಸ್ ಜಾಲತಾಣದಲ್ಲಿ ಈ ಕುರಿತ ವಿಡಿಯೋ ಸುದ್ದಿ 11ನೇ ಸ್ಥಾನ ಪಡೆದಿದೆ. ಯೂಟ್ಯೂಬ್ನಲ್ಲಿ ಅಪ್ ಲೋಡ್ ಮಾಡಿದ 24 ಗಂಟೆಯೊಳಗೆ 11 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಘಟನೆ ನಡೆದದ್ದು ಎಲ್ಲಿ? ಏಕೆ?
ವಿಡಿಯೋ ವೈರಲ್ ಆದ ಆರಂಭದಲ್ಲಿ ಬಂಡೀಪುರ-ಊಟಿ ರಸ್ತೆಯ ಮಧುಮಲೆ ಅರಣ್ಯ ವಲಯದಲ್ಲಿ ನಡೆದಿದೆ ಎಂದು ವರದಿಯಾಗಿತ್ತು. ಬಳಿಕ, ವೈನಾಡಿನಿಂದ ಪುಲ್ಪಳ್ಳಿಗೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವೈನಾಡಿನ ವಿಮಲ್ ಎಂಬ ಯುವಕ ತನ್ನ ಸ್ನೇಹಿತನೊಂದಿಗೆ ತೆರಳಿದ್ದಾಗ ಹುಲಿ ಇವರಿಬ್ಬರ ಮೇಲೆ ಮುಗಿಬಿದ್ದಿದೆ ಎಂದು ತಿಳಿದುಬಂದಿದೆ. ವಿಮಲ್ ಮತ್ತು ಸ್ನೇಹಿತ ಕಿಡಿಗೇಡಿ ಕೃತ್ಯ ಮಾಡಿದ್ದರಿಂದಲೇ ಹುಲಿ ರೊಚ್ಚಿಗೆದ್ದು ಮುಗಿಬಿದ್ದಿದ್ದು, ಬೈಕ್ ವೇಗ ಹೆಚ್ಚಾಗುವ ವೇಳೆ ಬಂದ ಕರ್ಕಶ ಶಬ್ಧದಿಂದ ಬೆದರಿ ಹುಲಿ ಬೇರೆಡೆ ಓಡಿದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ.
ಘಟನೆ ಸಂಬಂಧ ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿಗೆ ಪ್ರತಿಕ್ರಿಯಿಸಿ ಘಟನೆ ಬಂಡೀಪುರ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸುದ್ದಿಯಾಗಿ ವೈರಲಾದ ಟೈಗರ್ ಚೇಸಿಂಗ್ ವಿಡಿಯೋ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ.