ಚಿಕ್ಕಮಗಳೂರು: ಜಿಲ್ಲೆಯ ದತ್ತಪೀಠದಲ್ಲಿ ವಿವಾದದ ಮೇಲೆ ವಿವಾದ ಉಂಟಾಗುತ್ತಿದೆ. ಇದೀಗ ಒಂದು ಗುಂಪು ಆವರಣ ಮತ್ತು ಗುಹೆಯ ಒಳಗೆ ಪ್ರಾರ್ಥನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಜಿಲ್ಲಾಧಿಕಾರಿ ಸಭೆ ನಡೆಸಿದ್ದಾರೆ.
ಕೋರ್ಟ್ ಆದೇಶದ ಅನ್ವಯ ಆವರಣ ಸೇರಿ ಗುಹೆ ಒಳಗೆ ಪ್ರಾರ್ಥನೆ, ನಮಾಜ್, ಪೂಜೆ ಸಲ್ಲಿಸಲು ಅವಕಾಶವಿಲ್ಲ. ಅಲ್ಲದೇ, ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್ರಿಂದ ಮಾತ್ರ ದತ್ತ ಪಾದುಕೆ, ಗೋರಿಗಳಿಗೆ ಪೂಜೆಗೆ ಅವಕಾಶ ನೀಡಲಾಗಿದೆ. ಆದರೆ, ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಗುಂಪೊಂದು ಪ್ರಾರ್ಥನೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಈ ವಿಡಿಯೋ ಹರಿದಾಡುತ್ತಿರುವುದರಿಂದ ಮುಜರಾಯಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಂಡು ಬರುತ್ತಿದೆ. ಈ ಘಟನೆ ಬೆಳಕಿಗೆ ಬಂದ ಕೂಡಲೇ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ದಿಢೀರ್ ಸಭೆ ನಡೆಸಿದ್ದಾರೆ. ಮುಜಾರಾಯಿ ಇಲಾಖೆ ಅಧಿಕಾರಿಗಳ ಸಭೆ ನಡೆದಿರುವ ಡಿಸಿ ಕೆ.ಎನ್.ರಮೇಶ್ ಎಲ್ಲ ಕಡತಗಳನ್ನು ತಮ್ಮ ಕಚೇರಿಗೆ ತರಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ಗರ್ಭಗುಡಿ, ಪೂಜೆ, ನಿರ್ವಹಣೆ ವಿಚಾರ ಮಾತ್ರ ಕೋರ್ಟ್ ಮುಂದಿದೆ. ಇಲ್ಲಿ ಕೋರ್ಟ್ ಆದೇಶ ಉಲ್ಲಂಘನೆ ಆಗಿಲ್ಲ. ಆಗೋಕೆ ಬಿಡಲ್ಲ. ವಿವಾದಿತ ಸ್ಥಳಕ್ಕೂ ಈಗ ವಿಡಿಯೋದಲ್ಲಿ ಕಾಣಿಸಿಕೊಂಡ ಪ್ರದೇಶಕ್ಕೂ ವ್ಯತ್ಯಾಸ ಮತ್ತು ದೂರ ಇದೆ. ಅಲ್ಲದೇ, ಇದು ಹಳೇ ವಿಡಿಯೋ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಮರ್ಪಕ ವಿದ್ಯುತ್ ಕೊಡ್ತಿಲ್ಲ ಎಂದು ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ