ಚಿಕ್ಕಮಗಳೂರು: ಹತ್ತು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಆಮೇಲೆ ಡಿಐಜಿ, ಐಜಿ ಆಗಿ ಎಸಿ ರೂಮಲ್ಲಿ ಕೂತು ಕೆಲಸ ಮಾಡಲು ಆಸಕ್ತಿ ಇಲ್ಲ ಎಂದು ನಾನು ಸಿದ್ಧಾರ್ಥ್ ಅಣ್ಣಾ ಬಳಿ ಹೇಳಿದ್ದೆ. ಅದಕ್ಕವರು ರಾಜೀನಾಮೆ ಕೊಡಿ ನಾನಿದ್ದೇನೆ ಎಂದು ಹೇಳಿ ಧೈರ್ಯ ತುಂಬಿರುವ ವಿಚಾರವನ್ನು ಮಾಜಿ ಐಪಿಎಸ್ ಅಧಿಕಾರಿ ಹಾಗು ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಮೆಲುಕು ಹಾಕಿದರು.
ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಹೆಗ್ಡೆ ಪುತ್ಥಳಿಯನ್ನು ಅವರ ಅಭಿಮಾನಿ ಬಳಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನಾವರಣ ಮಾಡಿದೆ. ಮೂಡಿಗೆರೆ ತಾಲೂಕಿನ ಕುದುರೆಗುಂಡಿಯ ಸಮೀಪ ನಡೆದ ಈ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಐಪಿಎಸ್ ಅಧಿಕಾರಿ ಹಾಗು ತಮಿಳು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಆಗಮಿಸಿದ್ದರು. ಈ ವೇಳೆ ಅವರು ಮಾತನಾಡಿದರು.
'ನನ್ನ ರಾಜೀನಾಮೆಯನ್ನು ನಾವಿಬ್ಬರೂ ಸೇರಿ ಡಿಸೈಡ್ ಮಾಡಿದ್ದೆವು. ಸಿದ್ಧಾರ್ಥ್ ಹೆಗ್ಡೆ ಅವರ ಕೆಫೆ ಡೇ ಚೇಂಬರ್ ರೂಂನಲ್ಲಿ ಕೂತು ನಾವು ಮೂರೂವರೆ ಗಂಟೆ ಮಾತನಾಡಿದ್ದೆವು. ಈ ವೇಳೆ ನಾನು, ನನಗೆ ಕಾರ್ ಡೋರ್ ಓಪನ್ ಮಾಡಲು ಇಬ್ಬರಿದ್ದಾರೆ. ನಾಲ್ಕು ಜನ ಸೆಲ್ಯೂಟ್ ಹೊಡೀತಾರೆ. ಆದರೆ ನನಗಿದರಿಂದ ಸಂತೋಷವಿಲ್ಲ, ಕೃಷಿ ಮಾಡ್ಬೇಕು, ಊರಿಗೆ ಹೋಗ್ಬೇಕು, ಸಾಧಾರಣ ಮನುಷ್ಯನಂತೆ ಬದುಕ್ಬೇಕು. ಸಾಮಾನ್ಯ ಮನುಷ್ಯನ ಜೀವನದಲ್ಲಿ ಬದಲಾವಣೆ ಮಾಡ್ಬೇಕು ಎಂಬ ಆಸೆಯಿದೆ ಸರ್ ಎಂದು ಅವರಿಗೆ ಹೇಳಿದ್ದೆ' ಎಂದು ಅಣ್ಣಾಮಲೈ ತಿಳಿಸಿದರು.
ಓದಿ: 'ಅಧಿಕಾರಿ' ಸಹೋದರರ ಪಕ್ಷಾಂತರ ಪರ್ವ: ಸುವೆಂದು ಬೆನ್ನಲ್ಲೇ ಬಿಜೆಪಿ ಸೇರಿದ ಸೌಮೆಂದು