ಚಿಕ್ಕಮಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಬೈಕ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಇತ್ತ ಅವರ ತವರೂರಾದ ಪಂಚನಹಳ್ಳಿಯಲ್ಲಿ ನೀರವ ಮೌನ ಆವರಿಸಿದೆ.
ಅಪಘಾತದಲ್ಲಿ ತಲೆಗೆ ಪೆಟ್ಟಾದ ಹಿನ್ನೆಲೆ ವಿಜಯ್ ಅವರ ಮೆದುಳು ನಿಷ್ಕ್ರಿಯ ಆಗಿರುವ ಕುರಿತು ಈಗಾಗಲೇ ಅಪೋಲೋ ಆಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ. ಈ ಸುದ್ದಿ ಕೇಳಿ ಅವರ ಹುಟ್ಟೂರಾದ ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮಸ್ಥರು ಮೌನಕ್ಕೆ ಶರಣಾಗಿದ್ದಾರೆ. ಜೊತೆಗೆ ಬಾಲ್ಯದ ಗೆಳೆಯನ ಸವಿನೆನಪಿನ ಘಳಿಗೆಗಳನ್ನು ಸ್ನೇಹಿತರು ಬಿಚ್ಚಿಟ್ಟಿದ್ದಾರೆ.
ಸಂಚಾರಿ ವಿಜಯ್ ಹುಟ್ಟು ಕಲಾವಿದರು. ನಟನೆ ಅವರ ರಕ್ತದಲ್ಲೇ ಬಂದಿದೆ. ಅವರು ಊರಿಗೆ ಬಂದಾಗ ಪ್ರತಿಯೊಬ್ಬರನ್ನು ಪ್ರೀತಿ-ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಹಾಗು ಛಲ ಅವರಲ್ಲಿ ಹುಟ್ಟಿನಿಂದಲೂ ಇತ್ತು. ಅವರಿಗೆ ಊರಿನ ತುಂಬಾ ಸ್ನೇಹಿತರಿದ್ದಾರೆ. ಅವನಿಗೆ ಈರೀತಿ ಆಗಿದೆ ಎಂದರೆ ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಸಾಹಿತ್ಯವನ್ನು ದೆಹಲಿಗೆ ತೆಗೆದುಕೊಂಡು ಹೋದ ವ್ಯಕ್ತಿ ಅವರು. ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ವಿಜಯ್ ಅವರೊಂದಿಗಿನ ಒಡನಾಟದ ಕುರಿತು ಅವರ ಸ್ನೇಹಿತರು ಹಾಗೂ ಗ್ರಾಮಸ್ಥರು ಮೆಲುಕು ಹಾಕಿದರು.