ಚಿಕ್ಕಮಗಳೂರು: ಅಕ್ರಮವಾಗಿ ಒತ್ತುವರಿಯಾಗಿರುವ ಕೆರೆ ಜಮೀನುಗಳನ್ನು ವಶಪಡಿಸಿಕೊಂಡು, ಅವುಗಳನ್ನು ಪುನಶ್ಚೇತನಗೊಳಿಸಿ ಹೂಳು ತೆಗೆಯುವ ಮೂಲಕ ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದರು.
ಬಿಳೆಕಲ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೆ ಸಿದ್ಧನಹಳ್ಳಿ ಸಮೀಪದ ಕೆರೆ ಜಮೀನು ಪ್ರದೇಶದಲ್ಲಿ ಹೂಳು ಎತ್ತುವ ಕೆಲಸಕ್ಕೆ ಸಚಿವರು ಚಾಲನೆ ನೀಡಿದ್ದು, ಬಯಲು ಸೀಮೆ ಭಾಗದ ರೈತರ ಕೃಷಿ ಜಮೀನುಗಳಿಗೆ ಅನುಕೂಲ ಮಾಡುವ ಹಾಗೂ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಹಿಂದಿನ ಸರ್ಕಾರಿ ಭೂ ದಾಖಲೆಗಳಲ್ಲಿ ಕೆರೆ, ಕಟ್ಟೆ ಎಂದು ನಮೂದಾಗಿ ಒತ್ತುವರಿಯಾಗಿರುವ ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಸಂರಕ್ಷಣೆ ಮಾಡುವ ಹೊಣೆ ನಮ್ಮದಾಗಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಕೆಲಸಗಳಿಗೆ ಅನುಕೂಲವಾಗುವಂತೆ ಯಾವುದೇ ಪ್ರದೇಶಗಳು ಒತ್ತುವರಿಯಾಗಿದ್ದಲ್ಲಿ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಭಾಗದ ರೈತರ ಜಮೀನು ಭೂ ದಾಖಲೆಯಂತೆ ಕೆರೆ ಪ್ರದೇಶದಲ್ಲಿದ್ದು, ಆ ಭಾಗವನ್ನು ಬಿಟ್ಟುಕೊಡುವಂತೆ ತಿಳಿಸಲಾಗಿದೆ. ಇಲ್ಲಿ ಯಾವುದೇ ರೈತರಿಗೆ ತೊಂದರೆ ನೀಡುವ ಉದ್ದೇಶವಿಲ್ಲ ಆ ಜಮೀನಿನ ಬದಲಾಗಿ ಬೇರೆಡೆಯಲ್ಲಿ ಜಾಗ ಒದಗಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಳೆಗಾಲದ ವೇಳೆಯಲ್ಲಿ ಹರಿಯುವ ನೀರನ್ನು ಸಂಗ್ರಹಿಸಲು ಕೆರೆ-ಕಟ್ಟೆಗಳ ನಿರ್ಮಾಣ ಅವಶ್ಯಕವಾಗಿದ್ದು, ಈ ಪ್ರದೇಶದಲ್ಲಿ ಕೆರೆ ನಿರ್ಮಾಣದಿಂದಾಗಿ ಭೂಮಿಯ ಅಂತರ್ಜಲ ಮಟ್ಟ ಹೆಚ್ಚುವುದಲ್ಲದೇ ಇಲ್ಲಿನ ಕೃಷಿ ಜಮೀನುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ಕೆರೆಗಳನ್ನು ಪುನಶ್ಚೇತನಗೊಳಿಸಿ ಮರುಪೂರಣಗೊಳಿಸುವ ಕೆಲಸ ಮಾಡಲಾಗುವುದು ಎಂದರು.
ಈ ಹಿಂದೆ ಅಂತರ್ಜಲ ಮಟ್ಟ ಸಮೃದ್ಧವಾಗಿದ್ದರಿಂದ ಕಡಿಮೆ ಆಳದಲ್ಲಿಯೇ ನೀರು ದೊರೆಯುತ್ತಿತ್ತು. ಆದರೆ ಇಂದು ಎಲ್ಲೆಡೆ ಬೋರ್‌ವೆಲ್‌ಗಳ ಸಂಖ್ಯೆ ಅಧಿಕವಾಗಿದ್ದು ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ನೀರನ್ನು ಸಂರಕ್ಷಣೆ ಮಾಡುವ ಕೆಲಸವಾಗಬೇಕು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ನಿರ್ಮಿಸಿ ಅವುಗಳನ್ನು ಮರುಪೂರಣಗೊಳಿಸುವ ಕಾರ್ಯವಾಗಬೇಕೆಂದು ಜಿಲ್ಲಾ ಉಸ್ತವಾರಿ ಸಚಿವ ಸಿ.ಟಿ ರವಿ ಹೇಳಿದರು.