ಚಿಕ್ಕಮಗಳೂರು: ಹಣದ ಆಸೆಗೆ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಆರೋಪಿಗೆ ನಗರದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
2019 ಜನವರಿ 16 ರಂದು ರಾತ್ರಿ 9.30ರ ವೇಳೆ ಆರೋಪಿ ಗಣೇಶ್ ಎಂಬಾತ, ಮೂಡಿಗೆರೆ ತಾಲೂಕಿನ ಹೊರಟ್ಟಿ ಕಾಲೋನಿಯ ಸುರೇಶ್ ಎಂಬುವರ ಮನೆಯ ಮುಂಭಾಗದಲ್ಲಿ ತನ್ನ ತಾಯಿಗೆ ಬಂದಿದ್ದ 600 ರೂ. ವೃದ್ದಾಪ್ಯ ವೇತನದ ಹಣ ಕಿತ್ತುಕೊಳ್ಳಲು ಯತ್ನಿಸಿದ್ದನು. ಆದರೆ ತಾಯಿ ಆ ಹಣವನ್ನು ಮಗ ಗಣೇಶ್ಗೆ ನೀಡಲು ನಿರಾಕರಿಸಿದ ಹಿನ್ನೆಲೆ, ಕೋಪಗೊಂಡ ಗಣೇಶ್ ಊರುಗೋಲಿನಿಂದ ತಾಯಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದನು.
ಬಳಿಕ ಬಣಕಲ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಕೆ ಮಾಡಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಉಮೇಶ್ ಎಂ. ಅಡಿಗ ಅವರು, ಆರೋಪಿ ಗಣೇಶನಿಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲ್ಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 3 ತಿಂಗಳ ಶಿಕ್ಷೆ ವಿಧಿಸಲು ಆದೇಶ ಹೊರಡಿಸಲಾಗಿದೆ.