ಚಿಕ್ಕಮಗಳೂರು : ಹೆತ್ತ ಮಗಳನ್ನು ವೇಲ್ನಿಂದ ಕುತ್ತಿಗೆ ಬಿಗಿದು ಕೊಂದಿರುವ ತಂದೆಯೊಬ್ಬ ಮೃತದೇಹವನ್ನು ರೈಲ್ವೆ ಟ್ರ್ಯಾಕ್ ಬಳಿ ಬಿಸಾಡಿ ಹೋಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ನಡೆದಿದೆ.
ಮೃತಳನ್ನ 18 ವರ್ಷದ ರಾಧಾ ಎಂದು ಗುರುತಿಸಲಾಗಿದೆ. ಚಂದ್ರಪ್ಪ(48) ಎಂಬಾತ ಮಗಳನ್ನ ಕೊಂದ ಅಪ್ಪ ಆರೋಪಿ. ಈತ ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕಂಚಿನಕೊಪ್ಪ ಗ್ರಾಮದ ಎಂದು ತಿಳಿದು ಬಂದಿದೆ.
ಮೃತ ಯುವತಿ ಯುವಕನೋರ್ವನನ್ನ ಪ್ರೀತಿಸುತ್ತಿದ್ದಳು. ಇದು ಮನೆಯವರಿಗೆ ಇಷ್ಟವಿರಲಿಲ್ಲ. ಮನೆಯವರು ಬೇಡ ಎಂದರೂ ಆಕೆ ಸುಮ್ಮನಿರಲಿಲ್ಲ.
ಹಾಗಾಗಿ, ಕುಟುಂಬಸ್ಥರು ರಾಧಾಳಿಗೆ ಅವನಿಂದ ದೂರ ಇರುವಂತೆ ಎಚ್ಚರಿಸಿದ್ದರು. ಆದರೂ, ಯುವತಿ ಆತನೊಂದಿಗೆ ಪ್ರೇಮವನ್ನ ಮುಂದುವರೆಸಿದ್ದಳು. ಅವನನ್ನೇ ಮದುವೆಯಾಗುತ್ತೇನೆಂದು ಹಠಕ್ಕೆ ಬಿದ್ದಿದ್ದಳು.
ಆಕೆಯ ಹಠವನ್ನ ಅರಿತ ಕುಟುಂಬಸ್ಥರು ಅವನಿಂದ ಆಕೆಯನ್ನ ಸ್ವಲ್ಪ ದಿನ ದೂರ ಮಾಡಿದರೆ ಅವನನ್ನ ಮರೆಸಬಹುದು ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಂದ್ರಪ್ಪನ ಅಕ್ಕನ ಮನೆಗೆ ಕರೆದೊಯ್ದು ಒಂದು ವಾರ ಬಿಟ್ಟಿದ್ದರು.
ಊರಿನಲ್ಲಿ ಹಬ್ಬ ಇದ್ದ ಕಾರಣ ಬುಧವಾರ ದ್ವಿಚಕ್ರ ವಾಹನದಲ್ಲಿ ಮಗಳನ್ನ ವಾಪಸ್ ಕರೆದುಕೊಂಡು ಬರುವಾಗ ಚಂದ್ರಪ್ಪ ರಸ್ತೆ ಉದ್ಧಕ್ಕೂ ಮಗಳಿಗೆ ಬುದ್ಧಿ ಹೇಳಿ ಕರೆದುಕೊಂಡು ಬಂದಿದ್ದಾರೆ.
ಮೃತ ರಾಧಾ ಆಗಲೂ ತಂದೆ ಮಾತಿಗೆ ಬೆಲೆ ಕೊಡಲೇ ಇಲ್ಲ. ನಾನು ಅವನನ್ನೇ ಮದುವೆಯಾಗುತ್ತೇನೆ ಎಂದಿದ್ದಾಳೆ. ಮಗಳ ಮಾತಿನಿಂದ ಸಿಟ್ಟಾದ ಚಂದ್ರಪ್ಪ ತಾಳ್ಮೆ ಕಳೆದುಕೊಂಡಿದ್ದಾನೆ.
ಬೀರೂರು ಮಾರ್ಗವಾಗಿ ಊರಿಗೆ ಬರುತ್ತಿದ್ದಾಗ ಪಟ್ಟಣದ ಹೊರವಲಯದ ರೈಲ್ವೆ ಗೇಟ್ ಬಳಿ ಜನ ನಿಬಿಡ ಪ್ರದೇಶದಲ್ಲಿ ಮಗಳನ್ನು ವೇಲ್ನಿಂದ ಕುತ್ತಿಗೆಗೆ ಬಿಗಿದು ಕೊಂದಿದ್ದಾನೆ.
ಆಕೆ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಆರೋಪಿ ಟ್ರ್ಯಾಕ್ಟರ್ ಓಡಾಡಿ ಗುಂಡಿ ಬಿದ್ದಿದ್ದ ಜಾಗದಲ್ಲಿ ಆಕೆಯನ್ನ ಹಾಕಿ ಊರಿಗೆ ಹೋಗಿದ್ದಾನೆ. ಸ್ಥಳೀಯರಿಂದ ವಿಷಯ ತಿಳಿದು ಪೊಲೀಸರು ತನಿಖೆ ಮುಂದುವರೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಬೀರೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಆರೋಪಿ ಚಂದ್ರಪ್ಪನನ್ನ ಬಂಧಿಸಿ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.