ಚಿಕ್ಕಮಗಳೂರು : ಖಾಸಗಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟದ ಕಂದಕಕ್ಕೆ ಉರುಳಿ ಬಿದ್ದು, ಒಬ್ಬ ಮಹಿಳೆ ಮೃತಪಟ್ಟಿದ್ದು, ಬಸ್ನಲ್ಲಿದ್ದ ಹಲವರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 4.30ರ ಸುಮಾರಿಗೆ ಈ ಘಟನೆ ಜರುಗಿದೆ.
ಬೆಂಗಳೂರಿನಿಂದ ಹೊರನಾಡು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೇಲೂರು ಮೂಡಿಗೆರೆ ರಸ್ತೆಯ ಮಧ್ಯದಲ್ಲಿ ಬರುವ ಚೀಕನಹಳ್ಳಿ - ಕಸ್ಕೇಬೈಲ್ ನಡುವಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಕಾಫಿ ತೋಟದ ಕಂದಕಕ್ಕೆ ಉರುಳಿದೆ. ಸುಮಾರು 100 ಅಡಿ ಆಳಕ್ಕೆ ಉರುಳಿ ಬಿದ್ದಿದೆ.
ಈ ಸಂದರ್ಭದಲ್ಲಿ ಬಸ್ನ ಕಿಟಿಕಿಯಿಂದ ಹೊರಗೆ ಹಾರಿ ಬಿದ್ದ ಸುರೇಖಾ (47) ಎಂಬುವರು ಬಸ್ಸಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಪುರುಷ ಗಂಭೀರವಾಗಿ ಗಾಯಗೊಂಡಿದ್ದಾರೆ. 10 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೀರಭದ್ರೇಶ್ವರ ಎಂಬ ಖಾಸಗಿ ಬಸ್ನಲ್ಲಿ ಸುಮಾರು 48 ಮಂದಿ ಪ್ರಯಾಣಿಕರು ಹೊರನಾಡು ಪ್ರವಾಸ ಹೊರಟ್ಟಿದ್ದರು ಎಂದು ತಿಳಿದು ಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಗೋಣಿಬೀಡು ಠಾಣೆ ಪೊಲೀಸರು ಮತ್ತು ಬಣಕಲ್ ಸಮಾಜಸೇವಕ ಆರೀಫ್ ಅವರು ಇತರ ಆಂಬ್ಯುಲೆನ್ಸ್ ಚಾಲಕರೊಂದಿಗೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡವರನ್ನು ಬೇಲೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಹಾಸನ, ಬೆಂಗಳೂರಿಗೆ ರವಾನಿಸಲಾಗಿದೆ.
ಈ ಸ್ಥಳದಲ್ಲಿ ಸತತವಾಗಿ ಅಪಘಾತಗಳು ಸಂಭವಿಸುತ್ತಿರುತ್ತವೆ. ಈ ವರ್ಷದಲ್ಲಿ ಅನೇಕ ವಾಹನಗಳು ಇಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿವೆ. ಹೆದ್ದಾರಿ ಇಲಾಖೆಯವರು ಸೂಕ್ತ ತಡೆಗೋಡೆ ನಿರ್ಮಿಸಿಲ್ಲ, ಎಚ್ಚರಿಕೆಯ ನಾಮಫಲಕ ಕೂಡ ಹಾಕಿಲ್ಲ. ಈ ಅಪಘಾತಕ್ಕೆ ನೇರವಾಗಿ ಹೆದ್ದಾರಿ ಇಲಾಖೆಯವರೇ ಕಾರಣ. ಇನ್ನಾದರೂ ಸೂಕ್ತ ಎಚ್ಚರಿಕೆಯ ಫಲಕ ಮತ್ತು ತಡೆಗೋಡೆ ನಿರ್ಮಿಸುವ ಕೆಲಸ ಮಾಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ ರಸ್ತೆ ಅಪಘಾತ: ಮೃತರ ಸಂಖ್ಯೆ 13ಕ್ಕೆ ಏರಿಕೆ.. 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ