ಚಿಕ್ಕಮಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ಅತ್ತಿಗುಂಡಿ ಸಮೀಪದ ಕಾಫಿ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಚೇತನ್ ನಾಯಕ್ ಎಂಬ ವ್ಯಕ್ತಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಈತ ಅಪ್ರಾಪ್ತ ಬಾಲಕಿ ಶಾಲೆಗೆ ಹೋಗುವ ವೇಳೆ ಆಕೆಯನ್ನು ಹಿಂಬಾಲಿಸಿ ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ಪೀಡಿಸುತ್ತಿದ್ದ. 2014ರ ಮೇ 26 ರಂದು ಮಧ್ಯಾಹ್ನದ ವೇಳೆ ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಯನ್ನ ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ ನಡೆಸಿರೋದು ವಿಚಾರಣೆ ವೇಳೆ ಬಯಲಾಗಿತ್ತು.
ಬಾಲಕಿಯ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದಲ್ಲದೆ ತಂದೆ, ತಾಯಿಗೆ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆಯನ್ನೂ ಹಾಕಿದ್ದಾನೆ. ಬಾಲಕಿ ಗರ್ಭಿಣಿ ಆಗುತ್ತಿದ್ದಂತೆ ಆಕೆಗೆ ಅರಿಶಿಣದ ದಾರ ಕಟ್ಟಿ ಮದುವೆ ಆಗಿರುವುದಾಗಿ ನಂಬಿಸಿ ತಲೆ ಮರಿಸಿಕೊಂಡಿದ್ದ.
ಬಾಲಕಿಯನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ 5 ತಿಂಗಳ ಗರ್ಭಿಣಿಯಾಗಿದ್ದಳು. ಈ ಕುರಿತು ಪೋಷಕರು ಆರೋಪಿ ಚೇತನ್ ನಾಯಕ್ ವಿರುದ್ಧ ಆಲ್ದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಚೇತನ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಪೋಕ್ಸೋ ಕಾಯ್ದೆಯಡಿ ಒಟ್ಟು 10 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.