ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಗೆ ಇನ್ನು ಕೆಲ ತಿಂಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಹಾಲಿ ಶಾಸಕರು, ಚುನಾವಣಾ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯುಲು ಕಸರತ್ತು ನಡೆಸುತ್ತಿದ್ದಾರೆ. ಇದರ ಭಾಗವಾಗಿ ರಾಜಕೀಯ ಪಕ್ಷದ ಮುಖಂಡರೊಬ್ಬರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಸೀರೆ ಗಿಫ್ಟ್ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಪಕ್ಷದ ನಾಯಕರೊಬ್ಬರ ಪರವಾಗಿ ಬೆಂಬಲಿಗರು ಯುಗಾದಿ ಹಬ್ಬಕ್ಕಾಗಿ ಮಹಿಳೆಯರಿಗೆ ಸೀರೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗೆ ಉಡುಗೊರೆಯಾಗಿ ನೀಡಿದ ಸೀರೆಯೊಂದನ್ನು ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿ ಸುಟ್ಟು ಆಕ್ರೋಶ ಹೊರ ಹಾಕಿರುವ ಘಟನೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿದೆ.
ವ್ಯಕ್ತಿ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣೆ ನೆಪದಲ್ಲಿ ಮುಂಬರುವ ಯುಗಾದಿ ಹಬ್ಬಕ್ಕೆ ಸೀರೆ ಹಂಚಿಕೆ ಮಾಡಿದ್ದ ಬೆಂಬಲಿಗರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ರಾತ್ರಿ ಪಕ್ಷದವೊಂದರ ಕಾರ್ಯಕರ್ತರು ಭಕ್ತರಹಳ್ಳಿ, ಮಲ್ಲೇನಹಳ್ಳಿ ಭಾಗದಲ್ಲಿ ಸೀರೆ ಹಂಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೀರೆ ಹಂಚುವ ವೇಳೆ ಮನೆಗೆ ಬಂದವ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾನೆ.
ರಸ್ತೆ ಮಧ್ಯೆ ಸೀರೆಯನ್ನ ಸುಟ್ಟು ಸೀರೆ ಹಂಚಲು ಬಂದಿದ್ದ ಪಕ್ಷವೊಂದರ ಕಾರ್ಯಕರ್ತರಿಗೆ ಅಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಒಂದು ಕೆಜಿ ಅಕ್ಕಿ ಕೊಟ್ಟಿಲ್ಲ. ಈಗ ಎಲೆಕ್ಷನ್ ಬಂತು ಅಂತ ಸೀರೆ ಹಂಚಲು ಬಂದಿದ್ದೀರಾ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ ಆ ವ್ಯಕ್ತಿ, ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನಮಗೆ ಸೂಕ್ತವಾದ ಮೂಲ ಸೌಲಭ್ಯಬೇಕು ಎಂದು ನಶೆಯಲ್ಲಿ ಪಕ್ಷವೊಂದರ ಬೆಂಬಲಿಗರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ. ಈ ವೇಳೆ, ಎರಡ್ಮೂರು ಸೀರೆಗಳನ್ನ ರಸ್ತೆಗೆ ಹಾಕಿ ಬೆಂಕಿ ಹಚ್ಚಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷದ ಬೆಂಬಲಿಗರು ಯುಗಾದಿ ಹಬ್ಬದ ಹಿನ್ನೆಲೆ ಮನೆ ಮನೆಗೆ ತೆರಳಿ ಸೀರೆ ಹಂಚಿಕೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಸಾಮಾಜಿಕ ಜಾಲ ತಾಣದಲ್ಲಿ ಸೀರೆ ಸಿಟ್ಟು ಹಾಕಿರುವ ವಿಡಿಯೋ ವೈರಲ್ ಆಗಿದೆ.
ಚಿಕ್ಕಮಗಳೂರಿನಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿದಂತೆ ಇನ್ನುಳಿದ ಪ್ರಾದೇಶಿಕ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ಪ್ರಯತ್ನಗಳು ನಡೆಸುತ್ತವೆ. ಅನೇಕ ಪಕ್ಷದ ಮುಖಂಡರು ಪ್ರಚಾರ ನಡೆಸಿ ಭರವಸೆ ಮಾತುಗಳನ್ನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತದಾರ ಪ್ರಭು ಯಾವ ಪಕ್ಷದ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡ್ಬೇಕಾಗಿದೆ.
ಓದಿ : ರೈತರ ಮಕ್ಕಳಿಗೆ ಇ.ಡಿ ನೋಟಿಸ್ ಕೊಟ್ಟಿದೆಯೇ?: ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ