ಚಿಕ್ಕಮಗಳೂರು: ಕಾಡಾನೆಗಳು ಬೈನೆ ಮರವನ್ನು ಮನೆ ಮೇಲೆ ಬೀಳಿಸಿ ತಿಂದು ಹೋಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ವಿಶೇಷವಾಗಿ ಕಾಡಾನೆಗಳಿಗೆ ಬೈನೆ ಮರ ಅಂದರೆ ಬಹಳ ಅಚ್ಚುಮೆಚ್ಚು. ಬಲು ಅಚ್ಚುಮೆಚ್ಚಿನ ಆಹಾರವದು. ಕಾಡಾನೆಗಳು ಬೈನೆ ಮರದ ಆಸೆಗೆ ಮರವನ್ನು ಮನೆ ಮೇಲೆ ಬೀಳಿಸಿದೆ. ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್ ಎಂಬುವರ ಮನೆ ಮೇಲೆ ಕಾಡಾನೆಗಳು ಮರ ಬೀಳಿಸಿದ್ದು, ಮನೆ ಬಾಗಿಲಲ್ಲೇ ಬೈನೆ ಮರವನ್ನು ತಿಂದು ಹೋಗಿದೆ.
ಮನೆ ಮೇಲೆ ಮರಬಿದ್ದರು ಮನೆಯವರು ಆನೆ ಭಯದಿಂದ ಹೊರಗೆ ಬಂದಿರಲಿಲ್ಲ. ಮರ ಬಿದ್ದ ಪರಿಣಾಮ ಸಿಮೆಂಟ್ ಶೀಟ್ಗಳು ಪುಡಿ ಪುಡಿ ಆಗಿವೆ. ಈ ಘಟನೆ ತಿಳಿದ ಕೂಡಲೇ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರುತ್ತಿದೆ. ಪ್ರತಿನಿತ್ಯ ಮನುಷ್ಯ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಇದರಿಂದ ಮಲೆನಾಡು ಭಾಗದ ಜನರು ಹಾಗೂ ರೈತರು ಕಂಗಾಲಾಗುವಂತೆ ಮಾಡಿದೆ. ಈಗಾಗಲೇ ಕಾಡಾನೆಗಳು ದಾಳಿ ಮಾಡಿ, ಕಳೆದ ಎರಡು ತಿಂಗಳಲ್ಲಿ ಇಬ್ಬರ ಜೀವ ತೆಗೆದಿದ್ದು, ಲಕ್ಷಾಂತರ ಮೌಲ್ಯದ ಬೆಳೆಗಳನ್ನು ನಾಶ ಮಾಡಿವೆ. ಪ್ರತಿನಿತ್ಯ ರೈತರ ತೋಟಗಳಿಗೆ ಲಗ್ಗೆ ಇಡುವ ಕಾಡಾನೆಗಳು ರೈತರ ನಿದ್ದೆಗೆಡಿಸಿವೆ.
ಇತ್ತೀಚಿಗೆ ಜಿಲ್ಲೆಯ ಎನ್ಆರ್ ತಾಲೂಕಿನ ಕುಸುಬೂರು ಗ್ರಾಮದ ಹೊಸ ಕೊಪ್ಪದ ನಿವೃತ್ತ ಯೋಧ ಹಾಗೂ ಪ್ರಗತಿಪರ ಕೃಷಿಕ ಯತಿರಾಜ್ ಅವರ ಮನೆ ಸಮೀಪದ ಕೆರೆ ಹಾಗೂ ಪಕ್ಕದಲ್ಲಿ ಬರುವ ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಹಿಂಡು ಈಜಾಡಿಕೊಂಡು ಜಲ ಕ್ರೀಡೆ ಆಡಿತ್ತು. ಅರ್ಧ ಗಂಟೆಗೂ ಹೆಚ್ಚು ನೀರಿನಲ್ಲಿ ಕಾಡಾನೆಗಳು ಕಾಲ ಕಳೆದ ನಂತರ ಕಾಡಿಗೆ ಪ್ರಯಾಣ ಬೆಳೆಸಿದ್ದವು. ಕಳೆದ ವರ್ಷ ಇದೇ ಕೆರೆಗೆ 20ಕ್ಕೂ ಹೆಚ್ಚು ಕಾಡಾನೆಗಳು ಬಂದಿದ್ದವು. ಈ ವರ್ಷ ಆನೆ ಮರಿಗಳು ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಕಾಡಾನೆಗಳು ಬಂದಿವೆ.
ಇದನ್ನೂ ಓದಿ: ಚಿಕ್ಕಮಗಳೂರು: ಭದ್ರಾ ಹಿನ್ನೀರಿನಲ್ಲಿ ಕಾಡಾನೆಗಳ ಜಲಕ್ರೀಡೆ - ವಿಡಿಯೋ
ಹಳೆಯ ಪ್ರಕರಣ- ಕಾಡಾನೆ ಕಾರ್ಯಾಚರಣೆ ವೇಳೆ ನೌಕರ ಸಾವು: ಚಿಕ್ಕಮಗಳೂರಿನಲ್ಲಿ ನವೆಂಬರ್ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನವೆಂಬರ್ 22 ರಂದು ಸಂಜೆ ಆನೆಯನ್ನು ಕಾಡಿಗಟ್ಟುತ್ತಿದ್ದ ಸಂದರ್ಭದಲ್ಲಿ ಆನೆ ಕಾರ್ಯಾಚರಣೆ ಪಡೆಯ ನೌಕರ ಕಾರ್ತಿಕ್ ಗೌಡ ಮೇಲೆ ಕಾಡಾನೆ ದಾಳಿ ಮಾಡಿದ್ದರಿಂದ ಅವರು ಮೃತಪಟ್ಟಿದ್ದರು.