ಚಿಕ್ಕಮಗಳೂರು: ಭಾರತೀಯ ಸೇನೆಯಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಇಬ್ಬರು ಯೋಧರನ್ನು ಗ್ರಾಮಸ್ಥರು ಅದ್ಧೂರಿಯಿಂದ ಬರಮಾಡಿಕೊಂಡ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಜಲಧೀಹಳ್ಳಿಯಲ್ಲಿ ಕಂಡುಬಂತು.
ಸೇನಾ ನಿವೃತ್ತಿ ಹೊಂದಿ ಊರಿಗೆ ಮರಳಿದ ಅಜ್ಜಂಪುರ ತಾಲೂಕಿನ ಜಲಧೀಹಳ್ಳಿಯ ಇಬ್ಬರು ಯೋಧರಾದ ಶಂಕ್ರಪ್ಪ ಹಾಗೂ ಶಿವಕುಮಾರ್ ಅವರನ್ನು ಊರಿನ ಜನ ಅದ್ಧೂರಿಯಾಗಿ ಸ್ವಾಗತಿಸಿದರು. ತಾಲೂಕು ಕೇಂದ್ರ ಅಜ್ಜಂಪುರದಿಂದ 8 ಕಿ.ಮೀ. ದೂರದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಯೋಧರನ್ನು ಕರೆ ತರಲಾಯಿತು. ಜೊತೆಗೆ ದಾರಿ ಉದ್ದಕ್ಕೂ ಜೈ ಭಾರತ್ ಮಾತಾಕಿ ಜೈ ಅನ್ನೋ ಘೋಷವಾಕ್ಯ ಮೊಳಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಯೋಧರು, 18 ವರ್ಷಗಳ ಕಾಲ ನಾವು ಗಡಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಾಪಸಾಗುತ್ತಿದ್ದಂತೆ ಈ ರೀತಿಯ ಭರ್ಜರಿ ಸ್ವಾಗತ ಸಿಗುತ್ತದೆ ಎಂದು ಅಂದು ಕೊಂಡಿರಲಿಲ್ಲ. ಇಲ್ಲಿ ನಮಗೆ ಸಿಕ್ಕ ಸತ್ಕಾರ, ಸ್ವಾಗತವನ್ನು ಎಂದಿಗೂ ಮರೆಯುವುದಿಲ್ಲ. ಗ್ರಾಮಸ್ಥರು ನಮಗೆ ತೋರಿದ ಈ ಪ್ರೀತಿ ವಿಶ್ವಾಸ ನೋಡಿದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇನೆ ಸೇರಬೇಕು ಎಂಬ ಅಭಿಪ್ರಾಯ ಮೂಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.