ಚಿಕ್ಕಮಗಳೂರು: ಸತತ 20 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸೇನಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧರನ್ನ ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು.
ಭಾರತೀಯ ಸೇನೆಯಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಇಂದು ತಮ್ಮ ತವರೂರಿಗೆ ಬಂದ ಏರ್ಫೋರ್ಸ್ನಲ್ಲಿ ಸೇವೆ ಸಲ್ಲಿಸಿದ ಯೋಧ ಆರ್ ಶ್ರೀಕಾಂತ್, ಬಿಎಸ್ಎಫ್ನಲ್ಲಿ ಸೇವೆ ಸಲ್ಲಿಸಿದ ಯೋಧ ಕೃಷ್ಣಮೂರ್ತಿ ಹಾಗೂ ಗುರಪ್ಪ ಅವರನ್ನ ಗ್ರಾಮಸ್ಥರು ಅದ್ಧೂರಿಯಾಗಿ ಆತ್ಮೀಯವಾಗಿ ಬರಮಾಡಿಕೊಂಡರು.
ಪಟ್ಟಣದಲ್ಲಿ 3-4 ಕಿಲೋ ಮೀಟರ್ ಉದ್ದಕ್ಕೂ ತೆರೆದ ಜೀಪ್ನಲ್ಲಿ ಱಲಿ ಮಾಡಿ ಅಜ್ಜಂಪುರದ ಜನರು ಸಂಭ್ರಮಿಸಿದರು. ದಾರಿಯುದ್ದಕ್ಕೂ ಭಾರತ ಮಾತಾಕಿ ಜೈ, ವಂದೇ ಮಾತರಂ ಅನ್ನೋ ಘೋಷಣೆಗಳು ಮೊಳಗಿದವು. ಊರಿಗೆ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು ವೀರ ಯೋಧರಿಗೆ ಹೂ ನೀಡಿ, ಸೆಲ್ಯೂಟ್ ಹೊಡೆದು ದೇಶಪ್ರೇಮ ಮೆರೆದರು.
ತಮ್ಮೂರಿನ ಜನರು ನೀಡಿದ ಅದ್ಧೂರಿ ಸ್ವಾಗತ ನೋಡಿ ಮೂವರು ಯೋಧರು ತಮ್ಮ ಸೇವೆ ಸಾರ್ಥಕವಾಯಿತು ಎಂದರು. ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ವಾಪಸ್ಸಾದಾಗ ಈ ರೀತಿಯ ಒಂದು ಸತ್ಕಾರ ಸಿಗುತ್ತೆ ಅನ್ನೋ ಕಲ್ಪನೆ ಯೋಧರಿಗಿರಲಿಲ್ಲ. ಎಲ್ಲವನ್ನೂ ಸರ್ಪ್ರೈಸ್ ರೀತಿಯಲ್ಲಿ ಆಯೋಜಿಸಿ ತಮ್ಮೂರಿನ ಹೆಮ್ಮೆಯ ಯೋಧರ ಬಗ್ಗೆ ಊರಿನ ಜನರು ಗೌರವ, ಅಭಿಮಾನ ತೋರಿದರು.