ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯದಿಂದ 4 ತಿಂಗಳ ಮಗು ಮೃತಪಟ್ಟಿದೆ ಎಂಬ ಆರೋಪ ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕೇಳಿ ಬಂದಿದೆ. ಹಾಸನದ ಬೇಲೂರು ಸಮೀಪದ ಸೂರಾಪುರ ಗ್ರಾಮದ ಗೋಪಾಲ್ ಹಾಗೂ ಮೀನಾಕ್ಷಿ ದಂಪತಿಯ ಮಗು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರು ಮತ್ತು ನರ್ಸ್ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀನಾಕ್ಷಿ ಅವರ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ ಪೋಷಕರು ಮಗುವನ್ನು ಚಿಕ್ಕಮಗಳೂರು ನಗರದ ಹೆರಿಗೆ ಆಸ್ಪತ್ರೆಯ ಮಕ್ಕಳ ಘಟಕದ ವೈದ್ಯರ ಬಳಿ ತಪಾಸಣೆಗೊಳಪಡಿಸಿದ್ದಾರೆ. ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಹಾಲು ಕುಡಿಸಬಾರದೆಂದು ಹೇಳಿದ್ದರು. ಬುಧವಾರ ಸಂಜೆಯವರೆಗೂ ಆರೋಗ್ಯವಾಗಿದ್ದ ಮಗುವಿಗೆ ಬಳಿಕ ಬಂದ ನರ್ಸ್ ಒಬ್ಬರು ಹಾಲು ಕುಡಿಸಲು ಮುಂದಾಗಿದ್ದಾರೆ. ಹಾಲು ಕುಡಿಸುತ್ತಿದ್ದಂತೆ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು, ವೈದ್ಯರು ಹಾಗೂ ನರ್ಸ್ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ, ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಪ್ರತಿಭಟನೆ