ಚಿಕ್ಕಮಗಳೂರು: ಮನೆಯಲ್ಲಿ ಮಾಡಿದ್ದ ಬಿರಿಯಾನಿ ಸೇವೆಸಿ 17 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮನೆಯೊಂದರಲ್ಲಿ ಸೋಮವಾರ ಖಾಸಗಿ ಕಾರ್ಯಕ್ರಮವೊಂದು ನಡೆದಿತ್ತು. ಕಾರ್ಯಕ್ರಮದ ನಿಮಿತ್ತ ಬಿರಿಯಾನಿ ತಯಾರಿಸಲಾಗಿತ್ತು. ಆದರೆ, ಸೋಮವಾರದ ಬಿರಿಯಾನಿಯನ್ನು ಮರುದಿನ ಸೇವಿಸಿದ್ದ ಪರಿಣಾಮ 17 ಜನ ಅಸ್ವಸ್ಥರಾಗಿದ್ದರು. ಸದ್ಯ ಅವರು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಿರಿಯಾನಿಯನ್ನು ಕುಟುಂಬಸ್ಥರ ಜೊತೆ ಗ್ರಾಮದ ಕೆಲವರು ಸೇವಿಸಿದ್ದರು. ಆದರೆ, ಸೇವಿಸಿದ ಸ್ವಲ್ಪ ಹೊತ್ತಿನ ಬಳಿಕ ಕೆಲವರಲ್ಲಿ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿತ್ತು. ವಾಂತಿ ಮತ್ತು ಭೇದಿ ಉಲ್ಬಣಗೊಂಡ ಹಿನ್ನೆಲೆ ಆಂಬ್ಯುಲೆನ್ಸ್ನಲ್ಲಿ ಎಲ್ಲರನ್ನೂ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿಂದಿನ ದಿನ ತಯಾರಿಸಿದ್ದ ಮಾಂಸಾಹಾರ ಮರು ದಿನಕ್ಕೆ ವಿಷಪೂರಿತಗೊಂಡಿದ್ದು, ಅದನ್ನೇ ಗ್ರಾಮಸ್ಥರು ಸೇವಿಸಿದ್ದರಿಂದ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಪರಿಣಾಮ ಯಾರ ಪ್ರಾಣಕ್ಕೂ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆಗೆ ದಾಖಲಾದ ಗ್ರಾಮಸ್ಥರಲ್ಲಿ 8 ಪುರುಷರು ಹಾಗೂ 9 ಮಹಿಳೆಯರು ಚೇತರಿಸಿಕೊಳ್ಳುತ್ತಿದ್ದಾರೆ. ಈ ವಿಷಯ ತಿಳಿದು ಕಡೂರು ಶಾಸಕ ಕೆಎಸ್ ಆನಂದ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಯೋಗಕ್ಷೇಮ ವಿಚಾರಿಸಿದರು.
ಇದನ್ನೂ ಓದಿ: ರಾಮನಗರ: ದರ್ಗಾದಲ್ಲಿ ವಿತರಿಸಿದ ಸಿಹಿ ಪ್ರಸಾದ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಸಿಹಿ ಪ್ರಸಾದ ತಿಂದು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದ ಘಟನೆ ರಾಮನಗರದ ದರ್ಗಾವೊಂದರಲ್ಲಿ ಭಾನುವಾರ ನಡೆದಿತ್ತು. ಎಂ.ಜಿ.ರಸ್ತೆಯಲ್ಲಿರುವ ಪಿಎಸ್‌ವಿ ದರ್ಗಾದಲ್ಲಿ ನಡೆಯುತ್ತಿದ್ದ ಗಂಧ ಮಹೋತ್ಸವದಲ್ಲಿ ಪ್ರಸಾದ ವಿತರಿಸಲಾಗಿತ್ತು. ಪ್ರಸಾದ ಸೇವಿಸಿದ ನಂತರ ಜನರ ಆರೋಗ್ಯದಲ್ಲಿ ವ್ಯತ್ಯಾಸವಾಗಿತ್ತು. ಕೆಲವರು ವಾಂತಿ ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹಾಗು ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.