ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಶ್ರೀರಾಮ ಸೇನೆ ಸಂಘಟನೆ ವತಿಯಿಂದ ನಡೆಯುವ ದತ್ತಮಾಲ ಅಭಿಯಾನ ಕಾರ್ಯಕ್ರಮಕ್ಕೆ ಇಂದಿನಿಂದ ಚಾಲನೆ ದೊರೆತಿದೆ.
ಚಿಕ್ಕಮಗಳೂರು ನಗರದಲ್ಲಿ ಶ್ರೀ ರಾಮಸೇನೆಯ 15ನೇ ವರ್ಷದ ದತ್ತಮಾಲ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಶ್ರೀರಾಮ ಸೇನೆ ಸಂಘಟನೆಯ ಕಾರ್ಯಕರ್ತರು ದತ್ತ ಮಾಲಾಧಾರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ನಗರದ ಶಂಕರ ಮಠದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರಿಂದ ಮಾಲಾಧಾರಣೆ ನಡೆದಿದ್ದು, 30 ಕ್ಕೂ ಹೆಚ್ಚು ಮಂದಿ ಈ ದಿನ ಮಾಲೆ ಧರಿಸಿದ್ದಾರೆ.
ಇದೇ ಸಂದರ್ಭದಲ್ಲಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವಂತೆ ಮಾಲಧಾರಿಗಳು ಆಗ್ರಹಿಸಿದ್ದು, ಇಂದಿನಿಂದ 26ರವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಮಾಲ ಅಭಿಯಾನ ನಡೆಯಲಿದೆ. ನವೆಂಬರ್ 26 ರಂದು ಇನಾಂ ದತ್ತಾತ್ರೇಯ ಪೀಠದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮಾಲಾಧಾರಣೆ ಮಾಡಿದ್ದಾರೆ.