ಚಿಕ್ಕಮಗಳೂರು: ದನದ ಕೊಟ್ಟಿಗೆಯಲ್ಲಿ ಬಂದು ಸೇರಿದ್ದ 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.
ಜಿಲ್ಲೆಯ ಎನ್.ಆರ್. ಪುರ ತಾಲೂಕು ಕೆರೆಮನೆ ಗ್ರಾಮದ ತಿಪ್ಪಯ್ಯ ಎಂಬುವರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿದ್ದ ಹಸುವನ್ನು ಹೊರಗೆ ಕಟ್ಟಲು ತರುವಾಗ ಕೊಟ್ಟಿಗೆಯೊಳಗೆ ಕಾಳಿಂಗ ಬುಸುಗುಟ್ಟಿತ್ತು. ಅದರ ಶಬ್ಧ ಕೇಳಿ ಮನೆಯವರು ಕೊಟ್ಟಿಗೆ ತುಂಬಾ ಹುಡುಕಾಟ ನಡೆಸಿದ್ದರು. ಈ ವೇಳೆ ದನಗಳಿಗೆ ನೀರು ಕುಡಿಸುವ ಬಾನಿಯ ಪಕ್ಕ ಇದ್ದ ಬೃಹತ್ ಸರ್ಪ ಕಂಡುಬಂದಿತ್ತು. ಕೂಡಲೇ ಉರಗತಜ್ಞ ಸ್ನೇಕ್ ಹರೀಂದ್ರಾಗೆ ವಿಷಯ ಮುಟ್ಟಿಸಿದ್ದರು.
ಸ್ಥಳಕ್ಕೆ ಬಂದ ಹರೀಂದ್ರ, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬಳಿಕ ಕಾಳಿಂಗನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆ ಹಿಡಿದ ನಂತರ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.