ಚಿಕ್ಕಬಳ್ಳಾಪುರ: ಇಂದು ಕೆರೆ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವತಿ ಕಾಲು ಜಾರಿ ಕೆರೆಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಬಿಗೇಮರದಹಳ್ಳಿಯಲ್ಲಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ಬೂರಾಮಕಳಹಳ್ಳಿ ಗ್ರಾಮದ ಅಮೃತ(22) ಮೃತ ಯುವತಿ.
ಅಮೃತ ಜಂಬಿಗೇಮರದಹಳ್ಳಿ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಜಂಬಿಗೇಮರದಹಳ್ಳಿ ಗ್ರಾಮದ ಕೆರೆ ತುಂಬಿ ಕೋಡಿಬಿದ್ದು ಹರಿಯುತ್ತಿದ್ದು, ಅದನ್ನು ನೋಡಲು ಹೋಗಿದ್ದರು. ಈ ವೇಳೆ ಕೆರೆಯ ಕಟ್ಟೆಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದ ಯುವತಿ ನೀರುಪಾಲಾಗಿದ್ದಾರೆ.
ಉಪ್ಪಿನ ಶಾಸ್ತ್ರ: ಕೆಲ ದಿನಗಳ ಹಿಂದೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಆತನ ಮೃತದೇಹದ ಮೇಲೆ ಉಪ್ಪು ಹಾಕಿ ಉಪ್ಪಿನ ಶಾಸ್ತ್ರ ಮಾಡಿದ್ದರು. ಈ ಮೂಲಕ ತಮ್ಮ ಮಗ ಬದುಕಿ ಬರುತ್ತಾನೆಂದು ಬಾಲಕನ ಪೋಷಕರು ನಂಬಿದ್ದರು. ಆದ್ರೆ ಇದು ಕೇವಲ ಮೂಢನಂಬಿಕೆ ಎಂಬುದನ್ನು ಅಧಿಕಾರಿಗಳು ಆ ಕುಟುಂಬಕ್ಕೆ ಮನವರಿಕೆ ಮಾಡಿಸಿ, ಬಾಲಕನ ಮೃತದೇಹ ಹೊರತೆಗೆದು ಅಂತ್ಯಕ್ರಿಯೆ ಮಾಡಿಸಿದ್ದರು.
ಇದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಯುವತಿಯ ಮೃತದೇಹವನ್ನು ನೀರಿನೊಳಗಡೆ ಬಿದ್ದ 4 ಗಂಟೆಯೊಳಗೆ ಅವರನ್ನು ಮೇಲೆ ತೆಗೆದು ಉಪ್ಪಿನ ಮೇಲೆ ಮಲಗಿಸಿದರೆ ಉಪ್ಪು ದೇಹದಲ್ಲಿ ಇರುವ ನೀರನ್ನು ಹೀರಿಕೊಂಡು ಅವರು ಬದುಕುತ್ತಾರೆ ಎಂದು ಮೃತ ಯುವತಿಗೆ ಉಪ್ಪಿನ ಶಾಸ್ತ್ರ ಮಾಡಿದ್ದಾರೆ. ಆದ್ರೆ ಇಲ್ಲೂ ಕೂಡ ಈ ಪ್ರಯೋಗ ಕೇವಲ ಮೂಢನಂಬಿಕೆ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಈಜಲು ಹೋಗಿ ಬಾಲಕ ಸಾವು: 4 ಗಂಟೆ ಉಪ್ಪಿನಲ್ಲಿ ಶವವಿಟ್ಟು ಬದುಕಿಸಲು ಪ್ರಯತ್ನ!