ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ನಂತರ ಅಂತರ್ಜಾತಿ ಎಂಬ ಕಾರಣಕ್ಕೆ ತನ್ನನ್ನು ಕೈಕೊಟ್ಟು ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪತಿಯ ಮನೆಯ ಮುಂದೆ ವಿಚ್ಛೇದಿತ ಪತ್ನಿಯು ಧರಣಿ ಕುಳಿತುಕೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಶಂಭೂಕನಗರದ ನಿವಾಸಿಯಾದ ಮಹಿಳೆ, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮೊದಲು ಈಕೆ ಬೇರೊಬ್ಬರನ್ನು ಮದುವೆಯಾಗಿದ್ದರು. ಆದರೆ, ಇದೇ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹೋದ್ಯೊಗಿ, ಸಾದೇನಹಳ್ಳಿ ಗ್ರಾಮದ ಮಂಜುನಾಥ್ ಎಂಬಾತನ ಪರಿಚಯವಾಗಿದೆ. ಆಗ ಮೊದಲ ಗಂಡನಿಗೆ ವಿಚ್ಛೇದನ ನೀಡು, ಇಬ್ಬರು ಮದುವೆ ಆಗೋಣ ಎಂದು ಆಕೆಗೆ ಮಂಜುನಾಥ್ ಪುಸಲಾಯಿಸಿದ್ದಾನೆ.
ಅಂತೆಯೇ, ಮಂಜುನಾಥ್ನ ಮಾತು ನಂಬಿದ ಈ ಮಹಿಳೆ ತನ್ನ ಮೊದಲ ಗಂಡನಿಗೆ ವಿಚ್ಛೇದನ ನೀಡಿದ್ದಾಳೆ. ಇತ್ತ, ಕೊಟ್ಟ ಮಾತಿನಂತೆ ಮಂಜುನಾಥ್ ಈಕೆಯನ್ನು 2021ರ ಜೂನ್ನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ. ಆದರೆ, ಮಂಜುನಾಥ್ ಕುಟುಂಬದವರು ಈ ಮಹಿಳೆ ಅಂತರ್ಜಾತಿಗೆ ಸೇರಿದ್ದಾಳೆ ಎಂದು ಆಕೆಯನ್ನು ಒಪ್ಪಿಕೊಂಡಿಲ್ಲ.
ಮಂಜುನಾಥ್ನೂ ವಿಚ್ಛೇದನ ಕೊಟ್ಟ: ಪ್ರೀತಿಸಿ ಮದುವೆಯಾದರೂ ಕುಟುಂಬದವರು ಒಪ್ಪಿಕೊಳ್ಳದ ಕಾರಣ ಮಂಜುನಾಥ್ ಮತ್ತೆ ಈಕೆಯನ್ನು ಪುಸಲಾಯಿಸಿ ತಾನೂ ಕೂಡ ವಿಚ್ಛೇದನ ಕೊಟ್ಟಿದ್ದಾನೆ. ಒಂದು ತಿಂಗಳು ನಂತರ ಮತ್ತೆ ಒಂದಾಗೋಣ ಎಂದು ಹೇಳಿ ವಿಚ್ಛೇದನ ನೀಡಿದ್ದಾನೆ. ಅಲ್ಲದೇ, ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಸ್ವಜಾತಿಯ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.
ಆದರೆ, ಈಗ ತನ್ನ ಮನೆಗೆ ಬರೋದನ್ನೇ ಮಂಜುನಾಥ್ ನಿಲ್ಲಿಸಿದ್ದಾನೆ ಎಂದು ಈ ಮಹಿಳೆ ಅಳಲು ತೋಡಿಸಿಕೊಂಡಿದ್ದಾಳೆ. ಹೀಗಾಗಿ ನನಗೆ ಗಂಡಬೇಕೆಂದು ಮನೆ ಮುಂದೆ ಕಳೆದ ಎರಡು ದಿನಗಳಿಂದ ಧರಣಿ ಕುಳಿತಿದ್ದಾಳೆ. ಇತ್ತ, ಈ ಬಗ್ಗೆ ಮಂಜುನಾಥ್ ಮಾತನಾಡಿ, ಮಾತ್ರ ಪ್ರೀತಿಸಿದ್ದು ನಿಜ. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಕಾನೂನು ಕ್ರಮ ಪ್ರಕಾರ ಮುಂದೆ ನಡೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ಧಾನೆ.
ಇದನ್ನೂ ಓದಿ: ತಾಯಿ ಮೇಲೆ ಮಗನ ಕ್ರೌರ್ಯ: ಶೌಚಕ್ಕಾಗಿ ನಿರ್ಮಿಸಿದ ಗುಂಡಿಗೆ ತಳ್ಳಿದ ಕ್ರೂರಿ!