ಗುಡಿಬಂಡೆ: ಗ್ರಾಮೀಣ ಭಾಗದ ಜನತೆಗೆ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಕೊರತೆಯಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಅವರಿಗೆ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ನೀಡಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ಬೆಳೆಯುತ್ತಿದ್ದರು. ಸಿರಿಧಾನ್ಯಗಳನ್ನು ಗರ್ಭಿಣಿಯರಿಗೆ ಹೆಚ್ಚಾಗಿ ನೀಡುತ್ತಿದ್ದರು. ಸ್ಥಳೀಯವಾಗಿ ದೊರೆಯುವ ಹಣ್ಣು ಹಂಪಲುಗಳನ್ನು ನೀಡುತ್ತಿದ್ದರು. ಆದರೆ, ಇತ್ತೀಚೆಗೆ ಆ ಪದ್ದತಿ ಕಣ್ಮರೆಯಾಗುತ್ತಿದೆ ಎಂದರು.
ಮಸಾಲೆಯುಕ್ತ, ರಾಸಾಯನಿಕ ವಸ್ತುಗಳಿಂದ ಕೂಡಿದ ಆಹಾರ ಮಾರುಕಟ್ಟೆಗೆ ಧಾವಿಸಿರುವುದರಿಂದ ಅದನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಗರ್ಭಿಣಿಯರು ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿದ್ದಾರೆ. ಆದ್ದರಿಂದ ಸ್ಥಳೀಯವಾಗಿ ದೊರೆಯುವಂತಹ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ಗರ್ಭಿಣಿಯರು ಹಾಗೂ ಮಕ್ಕಳಿಗೆ ನೀಡಬೇಕೆಂದರು.