ಚಿಂತಾಮಣಿ (ಚಿಕ್ಕಬಳ್ಳಾಪುರ): ನಗರದ 31 ವಾರ್ಡ್‌ಗಳಿಗೂ ಕೊರೊನಾ ನೋಡಲ್ ಅಧಿಕಾರಿಗಳ ಸಹಿತ ವಾರ್ಡ್ ಸಮಿತಿಗಳನ್ನು ನೇಮಕ ಮಾಡಲಾಗಿದೆ. ನೋಡಲ್ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪರಸ್ಪರ ಸಮನ್ವಯದಿಂದ ಗಂಭೀರವಾಗಿ ಕಾರ್ಯನಿರ್ವಹಿಸಿ ವೈರಸ್ ಹರಡದಂತೆ ಶ್ರಮಿಸಬೇಕು ಎಂದು ತಾಲೂಕು ನೋಡಲ್ ಅಧಿಕಾರಿ ಪ್ರಸಾದ್ ಸೂಚಿಸಿದರು.
ವಾರ್ಡ್ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕ್ವಾರಂಟೈನ್ಗೆ ಒಳಪಟ್ಟವರ ಮೇಲೆ ಹದ್ದಿನ ಕಣ್ಣಿಡಿ. ಅವರು ಮನೆಯಿಂದ ಹೊರ ಬಂದರೆ ಕಠಿಣ ಕ್ರಮ ಕೈಗೊಳ್ಳಿ ಎಂದ ಅವರು, ಸೀಲ್ ಡೌನ್ ಮತ್ತು ಲಾಕ್‌ಡೌನ್ ಪ್ರದೇಶದ ಅಧಿಕಾರಿಗಳು ಕೂಡಲೇ ಕಾರ್ಯೋನ್ಮುಖರಾಗಬೇಕು. ಆ ಪ್ರದೇಶದಲ್ಲಿ ಸರ್ವೆ ನಡೆಸಬೇಕು ಎಂದರು.
ತಹಶೀಲ್ದಾರ್ ಹನುಮಂತರಾಯಪ್ಪ ಮಾತನಾಡಿ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿವೆ. ಸಾರ್ವಜನಿಕರ ಸಹಕಾರ ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮನ್ವಯತೆಯಿಂದ ಕೊರೊನಾ ನಿಯಂತ್ರಿಸಲು ಸಾಧ್ಯ ಎಂದರು.