ಚಿಕ್ಕಬಳ್ಳಾಪುರ: ಜಿಲ್ಲೆಯ ಹಲವು ಗ್ರಾಮದಲ್ಲಿನ ಕುರಿಗಳ ಸರಣಿ ಸಾವಿಗೆ ಗ್ರಾಮದೇವತೆಯಾದರೂ ನೆರವಿಗೆ ಬರಲಿ ಎಂಬ ಕಾರಣಕ್ಕೆ ಗ್ರಾಮಸ್ಥರು ಸತ್ತ ಕುರಿ, ಮೇಕೆಗಳನ್ನು ಮರಕ್ಕೆ ನೇತು ಹಾಕಿ ದೇವರ ಮೊರೆ ಹೋಗುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾಡಪ್ಪಲ್ಲಿ ,ಹೊನ್ನಂಪಲ್ಲಿ ,ಕೊತ್ತಕೋಟೆ ಮುಂತಾದ ಗ್ರಾಮಗಳಲ್ಲಿ ಕುರಿ-ಮೇಕೆಗಳ ಸಾಕಾಣಿಕೆ ಮೂಲಕ ಗ್ರಾಮಸ್ಥರು ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿ ಗ್ರಾಮದಲ್ಲೂ 1000ಕ್ಕೂ ಹೆಚ್ಚು ಕುರಿ ಮೇಕೆಗಳಿವೆ. ಆದರೆ ಇತ್ತೀಚೆಗೆ ಕುರಿ ಹಾಗೂ ಮೇಕೆಗಳ ಸರಣಿ ಸಾವು ಸಂಭವಿಸುತ್ತಿದೆ. ಹೀಗಾಗಿ ಗ್ರಾಮಸ್ಥರು ಸತ್ತ ಕುರಿ ಅಥವಾ ಮೇಕೆಯೊಂದನ್ನು ಗ್ರಾಮದ ಹೊರವಲಯದ ಮರವೊಂದಕ್ಕೆ ನೇತು ಹಾಕುತ್ತಿದ್ದಾರೆ. ಹೀಗೆ ನೇತು ಹಾಕಿದ್ರೆ ಗ್ರಾಮದೇವತೆ ಆ ಸತ್ತ ಕುರಿಯನ್ನ ಅವಾಹನೆ ಮಾಡಿಕೊಂಡು ಗ್ರಾಮದಲ್ಲಿನ ಬೇರ್ಯಾವ ಕುರಿಗಳನ್ನು ಬಲಿ ಪಡೆಯುವುದಿಲ್ಲ ಅನ್ನೋದು ಗ್ರಾಮಸ್ತರ ಮೂಢನಂಬಿಕೆ.
ಮಳೆ ಇಲ್ಲದೆ ಬೆಟ್ಟ ಗುಡ್ಡದ ಪಕ್ಕದಲ್ಲೇ ಇರೋ ಕುಗ್ರಾಮದಲ್ಲಿ ಬರಗಾಲದ ನಡುವೆ ಜನರಿಗೆ ಈ ಕುರಿ ಸಾಕಾಣಿಕೆಯೇ ಬದುಕಿನ ಮೂಲ ಆದಾಯ. ಆದ್ರೆ ಕೆಲವು ಬೇರೆ ಅನಾರೋಗ್ಯ ಸೇರಿದಂತೆ ವಿಶೇಷವಾಗಿ ಚಳಿಗಾಲದಲ್ಲಿ ವಿಪರೀತ ಚಳಿಗೆ ಹಾಗೂ ಸಾಂಕ್ರಾಮಿಕ ಖಾಯಿಲೆಗಳಿಂದ ಕುರಿಗಳ ಸರಣಿ ಸಾವುಗಳು ಕಂಡುಬರುತ್ತಿವೆ. ಆದರೆ ಗ್ರಾಮದ ಜನ ಮುಗ್ಧರಾಗಿದ್ದು, ಈ ಮೂಢನಂಬಿಕೆ ಹಾಗೂ ಮೌಢ್ಯಾಚರಣೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.
ಬೆಟ್ಟಗುಡ್ಡಗಳಲ್ಲಿನ ಕಲ್ಲು ಗಣಿಗಾರಿಕೆಯಿಂದಾಗಿ ಸ್ಪೋಟಕಗಳ ರಾಸಾಯನಿಕ ವಿಷ ಗಾಳಿ, ವಿಪರೀತ ಧೂಳು, ಮೇವಿನ ಕೊರತೆ, ಅಶುದ್ದ ನೀರಿನ ಸೇವನೆಗಳಿಂದ ಈ ರೀತಿ ಸರಣಿ ಸಾವು ಸಂಭವಿಸುತ್ತವೆ. ಹೀಗಾಗಿ ಸತ್ತ ಕುರಿ ಆಗಲೀ ಯಾವುದೇ ಪ್ರಾಣಿಗಳನ್ನು ಗಾಳಿಗೆ ಬಿಟ್ಟು ಮರಕ್ಕೆ ನೇತು ಹಾಕಬಾರದು. ಹೀಗೆ ಮಾಡಿದರೆ ಸಾಂಕ್ರಾಮಿಕ ರೋಗಗಳು ಮತ್ತಷ್ಟು ಹರಡುವ ಸಾಧ್ಯತೆಯೇ ಹೆಚ್ಚು. ಸತ್ತ ಪ್ರಾಣಿಗಳ ದೇಹವನ್ನು ಮಣ್ಣಿನಲ್ಲಿ ಮುಚ್ಚಿದರೆ ಸಾಂಕ್ರಾಮಿಕ ರೋಗಗಳನ್ನು ತಡೆಯಬಹದಾಗಿದ್ದು, ಜನರಿಗೆ ಈ ಕುರಿತಾದ ಅರಿವಿನ ಅಗತ್ಯವಿದೆ. ಹೀಗಾಗಿ ಸಂಬಂಧಪಟ್ಟ ಸ್ಥಳೀಯ ಪಶು ವೈದ್ಯರು ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾಯಕ ಮಾಡಬೇಕಿದೆ.