ಚಿಕ್ಕಬಳ್ಳಾಪುರ: ಸ್ಮಶಾನಕ್ಕೆ ಹೋಗಲು ಸರಿಯಾದ ರಸ್ತೆ ಮಾರ್ಗವಿಲ್ಲದೆ ಮೃತದೇಹವನ್ನು ಹೊತ್ತು ಹರಿಯುತ್ತಿರುವ ಕಾಲುವೆ ದಾಟಿಕೊಂಡು ದಲಿತ ಮಹಿಳೆಯೊಬ್ಬರ ಅಂತ್ಯಸಂಸ್ಕಾರ ಮಾಡಲಾಗಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೋತೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆಯಿತು.
ಗ್ರಾಮದಲ್ಲಿ ಸ್ಮಶಾನಕ್ಕೆ 4 ಎಕರೆ ಜಾಗ ಗುರುತಿಸಿದ್ದರೂ ಸ್ಮಶಾನ ಅಭಿವೃದ್ಧಿ ಕಾರ್ಯ ಮಾತ್ರ ಆಗಿಲ್ಲ. ಹೀಗಾಗಿ ಶವಸಂಸ್ಕಾರಕ್ಕೆ ಇಲ್ಲಿನ ಜನರು ಹರಸಾಹಸಪಡಬೇಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇನ್ನೊಂದು ತಿಂಗಳೊಳಗೆ ಸ್ಮಶಾನಕ್ಕೆ ಹೋಗಲು ರಸ್ತೆ ವ್ಯವಸ್ಥೆ ಮಾಡಿಕೊಡದಿದ್ದಲ್ಲಿ ತಾಲ್ಲೂಕು ಕಚೇರಿಯ ಮುಂಭಾಗ ಉಗ್ರ ಹೋರಾಟ ನಡೆಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡಲಾಗುವುದು ಎಂದು ಗ್ರಾಮಸ್ಥರು ಹಾಗು ಕೋಲಾರ ಜಿಲ್ಲೆಯ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಡಾ.ಕೆ.ಎಂ.ಸಂದೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
ತಾಲ್ಲೂಕಿನಲ್ಲಿ ದಲಿತ ಸಮುದಾಯ ಇನ್ನೂ ಮೂಲಭೂತ ಸೌಕರ್ಯಗಳಿಲ್ಲದೇ ಕೊರಗುತ್ತಿದೆ. ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಿಂದ ಸ್ಮಶಾನದ ಅಭಿವೃದ್ಧಿ ಹಾಗೂ ರಸ್ತೆ ನಿರ್ಮಾಣ ಮಾಡಬಹುದು. ಆದರೆ ಪೋತೇನಹಳ್ಳಿ ಗ್ರಾಮದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಸ್ಮಶಾನ ಇದ್ದರೂ ಸಹ ಅಭಿವೃದ್ಧಿ ಮಾಡಿಲ್ಲ. ತ್ವರಿತಗತಿಯಲ್ಲಿ ಅಧಿಕಾರಿಗಳು ಸ್ಮಶಾನಕ್ಕೆ ದಾರಿ ಮಾಡಿಕೊಡಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸ್ಮಶಾನ ಭೂಮಿ ಬಂದ್.. ರಸ್ತೆ ಮಧ್ಯೆ ಶವ ಇಟ್ಟು ಪ್ರತಿಭಟನೆಗೆ ಕುಳಿತ ಗ್ರಾಮಸ್ಥರು