ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಪ್ರತಿ ದಿನ ಈ ಸೋಂಕು ವೇಗವಾಗಿ ಹರಡುತ್ತಿದೆ. ಈ ಕಾರಣದಿಂದ ನಗರ , ಪಟ್ಟಣ ಪ್ರದೇಶ ಹಾಗೂ ಗ್ರಾಮೀಣ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಹಸಿವಿನಿಂದ ಬಳಲುವ ಜನತೆಗೆ ಸ್ವಯಂ ಸೇವಕರು, ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು ಕೈಲಾದ ಮಟ್ಟಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ.
ಆದರೆ ಈ ಲಾಕ್ಡೌನ್ನಿಂದಾಗಿ ಗ್ರಾಮೀಣ ಜನರ ಬದುಕು ನಿಜಕ್ಕೂ ಶೋಚನೀಯ ಸ್ಥಿತಿಗೆ ತಲುಪಿದೆ. ದಿನಗೂಲಿಗಳು, ಅವಿಭಕ್ತ ಕುಟುಂಬಗಳು, ಜಮೀನುರಹಿತ ಬಡ ಜನರು, ತಮಗೆ ಬರುತ್ತಿದ್ದ ವೃದ್ಧಾಪ್ಯ ವೇತನ, ವಿಧವಾ ವೇತನಗಳನ್ನು ನಂಬಿಕೊಂಡ ಎಷ್ಟೋ ಜನರು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದಾರೆ. ಇಂತವರಿಗೆ ಹೊರಗೆ ಕೂಲಿಗೆ ಹೋಗುವ ಅವಕಾಶ ಕೂಡಾ ಇಲ್ಲ. ಕೂಲಿ ಮಾಡದಿದ್ದರೆ ಅಂದಿನ ಊಟ ಇಲ್ಲ. ಅಲ್ಪ ಸ್ವಲ್ಪ ಇರುವ ಆಹಾರ ಸಾಮಗ್ರಿ ಮುಗಿದ ನಂತರ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಕೆಲವೆಡೆ ಈಗಾಗಲೇ ಊಟಕ್ಕೆ ಸಿಗದೆ ಜನರು ಪರದಾಡುತ್ತಿದ್ದಾರೆ.
ಈ ಕಾರಣದಿಂದ ಕೂಲಿ ನಾಲಿ ಮಾಡಿ ತಾವು ಅಲ್ಪ ಸ್ವಲ್ಪ ಬ್ಯಾಂಕಿನಲ್ಲಿ ಕೂಡಿಟ್ಟ ಹಣವನ್ನು ಡ್ರಾ ಮಾಡಲು ಜನರು ಬ್ಯಾಂಕಿನ ಮುಂದೆ ಮುಗಿಬಿದ್ದಿದ್ದಾರೆ. ಮಾರಗಾನಕುಂಟೆಯ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಂದಿರುವ ಜನರ ಸಾಲೇ ಇದಕ್ಕೆ ಸಾಕ್ಷಿ. ಅಗತ್ಯ ವಸ್ತುಗಳ ಬೆಲೆ ಈಗ ದುಪ್ಪಟ್ಟಾಗಿದೆ. ಹಣದ ಅವಶ್ಯಕತೆ ಇರುವುದರಿಂದ ಬ್ಯಾಂಕಿನಲ್ಲಿರುವ ಹಣವನ್ನು ಡ್ರಾ ಮಾಡುವುದು ಬಿಟ್ಟು ಬೇರೆ ವಿಧಿಯಲ್ಲ. ಆದರೆ ಜನರು ಇಲ್ಲಿ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ನಗರ ಪ್ರದೇಶಗಳಂತೆ ಗ್ರಾಮೀಣ ಭಾಗಗಳಲ್ಲಿ ಕೂಡಾ ಜನರಿಗೆ ಅರಿವು ಮೂಡಿಸಬೇಕು, ಹಣ ಪಡೆಯಲು ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಹೀಗೆ ಗುಂಪುಗೂಡಿ ನಿಲ್ಲುವುದನ್ನು ತಡೆಗಟ್ಟಬಹುದು ಎಂಬುದು ಗ್ರಾಮೀಣ ಭಾಗದ ವಿದ್ಯಾವಂತರ ಅನಿಸಿಕೆ.